ವರ್ಷದ ಬಳಿಕ ಡಿಸಿಸಿಗೆ ಸಿಕ್ಕ ಸಾರಥಿ, ಇಟಗಿಗೆ ಪಟ್ಟ

| Published : Apr 03 2024, 01:37 AM IST

ಸಾರಾಂಶ

ಕೊನೆಗೂ ಕಾಲ ಕೂಡಿ ಬಂದ ಡಿಸಿಸಿಗೆ ಅಧ್ಯಕ್ಷ ಆಯ್ಕೆ ಭಾಗ್ಯ. ಲೋಕಸಭಾ ಚುನಾವಣೆ, ಬಣ ರಾಜಕೀಯದ ಸವಾಲು. ನಿರೀಕ್ಷೆಯಂತೆಯೇ ವಿಧಾನ ಪರಿಷತ್‌ ಮಾಜಿ ಸದಸ್ಯ ಬಸವರಾಜ ಪಾಟೀಲ್‌ ಇಟಗಿಗೆ ಡಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಲಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಒಂದು ವರ್ಷದಿಂದ ನನೆಗುದಿಗೆ ಬಿದಿದ್ದ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಸಮಯದಲ್ಲಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ರಾಯಚೂರು ಡಿಸಿಸಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.

ನಿರೀಕ್ಷೆಯಂತೆಯೇ ವಿಧಾನ ಪರಿಷತ್‌ ಮಾಜಿ ಸದಸ್ಯ ಬಸವರಾಜ ಪಾಟೀಲ್‌ ಇಟಗಿಗೆ ಡಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಲಾಗಿದ್ದು, ಹೊಸ ಅಧ್ಯಕ್ಷರ ಮುಂದೆ ಸಾಲು ಸಾಲು ಸವಾಲುಗಳಿದ್ದು ಅದನ್ನು ಸಮರ್ಥವಾಗಿ ಇವರು ನಿಭಾಯಿಸುವರೇ ಎನ್ನುವ ಪ್ರಶ್ನೆಗಳು ಪಕ್ಷದಲ್ಲಿ ತಲೆ ಎತ್ತಲು ಆರಂಭಿಸಿವೆ.

ಹಿನ್ನೋಟ: ಕಳೆದ ವರ್ಷ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪಕ್ಷದಲ್ಲಿನ ಗುಂಪುಗಾರಿಕೆ, ಟಿಕೆಟ್ ಕೈ ತಪ್ಪಿಸುವ ಕುತುಂತ್ರಕ್ಕೆ ಬಲಿಯಾಗಿ ಅಂದಿನ ಡಿಸಿಸಿ ಅಧ್ಯಕ್ಷ ಬಿ.ವಿ.ನಾಯಕ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅಂದಿನಿಂದ ಒಂದು ವರ್ಷ ಕಳೆದರು ಸಹ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷರ ಆಯ್ಕೆ ಪಕ್ಷಕ್ಕೆ ಕಗ್ಗಂಟಾಗಿ ಮಾರ್ಪಟ್ಟಿತ್ತು. ಪಕ್ಷದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ದ್ವೇಷದ ವಾತಾವರಣದಿಂದಾಗಿ ಲೋಕಸಭಾ ಚುನಾವಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕಾರ್ಯಕ್ಕೆ ತೀವ್ರ ಹಿನ್ನಡೆ ಉಂಟಾಗಿತ್ತು. ಡಿಸಿಸಿ ಸೀಟಿನ ಮೇಲೆ ಹಲವಾರು ಮುಖಂಡರು ಕಣ್ಣಿಟ್ಟಿದ್ದರು. ಪಕ್ಷದ ಬಣಗಳು ಶಕ್ತಿ ಪ್ರದರ್ಶಿಸಿ ತಮ್ಮವರಿಗೆ ಸ್ಥಾನ ಪಡೆದುಕೊಳ್ಳುವುದಕ್ಕಾಗಿ ಶತಾಯಗತಾಯ ಪ್ರಯತ್ನಗಳನ್ನು ನಡೆಸಿದ್ದರು. ಕಡೆಗೆ ಐದು ದಶಕಗಳ ನಂತರ ಡಿಸಿಸಿಗೆ ಲಿಂಗಾಯತ ಸಮುದಾಯದ ಬಸವರಾಜ ಪಾಟೀಲ್‌ ಇಟಗಿಯವರನ್ನು ನೇಮಿಸಿದ್ದು, ಇವರು ಬಣಗಳ ನಡುವಿನ ಶೀತಲ ಸಮರವನ್ನು ಮೆಟ್ಟು ನಿಂತು ಪಕ್ಷವನ್ನು ಯಾವ ರೀತಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆಯೋ ಎನ್ನುವ ಅನುಮಾನಗಳು ಸಹ ಕಾಡಲಾರಂಭಿಸಿವೆ.

ಸವಾಲು: ಹೊಸ ಅಧ್ಯಕ್ಷರ ಮುಂದೆ ಹಲವಾರು ಸವಾಲುಗಳಿವೆ. ಅದರಲ್ಲಿ ಸದ್ಯಕ್ಕೆ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದಾಗಿದೆ. ದೇಶದಾದ್ಯಂತ ಮೋದಿ ಮೇನಿಯಾ, ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತೊಮ್ಮೆ ಸ್ಪರ್ಧೆಗೆ ಗಟ್ಟಿ ಪೈಪೋಟಿ ನೀಡಬೇಕಾಗಿದ್ದು ಆ ನಿಟ್ಟಿನಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಇನ್ನು ಪಕ್ಷದಲ್ಲಿ ತೀರದ ಸಮಸ್ಯೆಯಾಗಿರುವ ಬಣ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕಾಗಿದೆ.

ಸಚಿವ ಎನ್‌.ಎಸ್‌.ಬೋಸರಾಜು ಬಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಹಾಗೂ ಮಾಜಿ ಶಾಸಕ ಸೈಯದ್‌ ಯಾಸೀನ್‌ ಅವರುಗಳ ಬಣಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಹಸಕ್ಕೆ ಇಟಗಿಯವರು ಕೈ ಹಾಕಬೇಕಾಗಿದ್ದು ಇವುಗಳನ್ನು ಯಾವ ರೀತಿಯಾಗಿ ನಿಭಾಯಿಸುತ್ತಾರೆಯೋ ಕಾದು ನೋಡಬೇಕಾಗಿದೆ.

ಜಿಲ್ಲೆ ಮೂವರಿಗೆ ಅವಕಾಶ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳ ನೇಮಕಾತಿಯಲ್ಲಿ ರಾಯಚೂರು ಜಿಲ್ಲೆಯ ಮೂರು ಜನರಿಗೆ ಅವಕಾಶ ದೊರಕಿರುವುದು ವಿಶೇಷವಾಗಿದೆ. ಡಿಸಿಸಿ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಡಿಸಿಸಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಕೆ.ಶಾಂತಪ್ಪ ಹಾಗೂ ಯುವ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಪಕ್ಷದ ಹಿರಿಯರು ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ಪ್ರಯಾಣಿಕವಾಗಿ ನಿಭಾಯಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಲಾಗುವುದು. ಯಾವುದೇ ಗೊಂದಲ, ಗುಂಪುಗಾರಿಕೆಗೆ ಆಸ್ಪದ ಕೊಡದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತೇನೆ.

-ಬಸವರಾಜ ಪಾಟೀಲ್‌ ಇಟಗಿ, ಡಿಸಿಸಿ, ಅಧ್ಯಕ್ಷ, ರಾಯಚೂರು