ಸಾರಾಂಶ
ಘಟನೆಯಲ್ಲಿ 6ಕ್ಕೂ ಹೆಚ್ಚು ಜನರ ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರೆಲ್ಲರೂ ಬಡತನದ ರೇಖೆಗಿಂತ ಕೆಳಗಿನವರೆ ಆಗಿದ್ದಾರೆ. ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ:
ಸಿಲಿಂಡರ್ ಸೋರಿ ಬೆಂಕಿ ಹೊತ್ತಿದ ಅವಘಡದಲ್ಲಿ ಮೃತಪಟ್ಟಿರುವ ಮತ್ತು ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ನಗರದ ಕೆಎಂಸಿಆರ್ಐಗೆ ಗುರುವಾರ ಭೇಟಿ ನೀಡಿದ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಘಟನೆಯಲ್ಲಿ 6ಕ್ಕೂ ಹೆಚ್ಚು ಜನರ ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರೆಲ್ಲರೂ ಬಡತನದ ರೇಖೆಗಿಂತ ಕೆಳಗಿನವರೆ ಆಗಿದ್ದಾರೆ. ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದರು.ಗಾಯಾಳುಗಳನ್ನು ಉಳಿಸಿಕೊಳ್ಳಲು ಕೆಎಂಸಿಆರ್ಐನ ವೈದ್ಯರು ಹಾಗೂ ಬೆಂಗಳೂರಿನ ವೈದ್ಯರ ತಂಡ ಎಲ್ಲ ರೀತಿಯಿಂದಲೂ ಪ್ರಯತ್ನ ಮುಂದುವರಿಸಿದ್ದಾರೆ. ಮೃತರ ಹಾಗೂ ಗಾಯಾಳುಗಳ ಕುಟುಂಬಕ್ಕೆ ನಾನು ಸಾಂತ್ವನ ಹೇಳಿದ್ದೇನೆ. ಸಿಎಂ ಸಹ ಆಸ್ಪತ್ರೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದರು.
ದೇಶದಲ್ಲಿ ಸಿಲಿಂಡರ್ ಬಳಕೆಯ ಬಗ್ಗೆ ಬಹಳಷ್ಟು ಸುಧಾರಣೆ ಆಗಬೇಕಿದೆ. ಸಿಲಿಂಡರ್ ಹೊಂದಿದ ಕುಟುಂಬದವರಿಗೆ ಅದರ ಸುರಕ್ಷತೆ ಹಾಗೂ ಬಳಕೆಯ ವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಮಹಾನಗರದಲ್ಲಿ ಮನೆ-ಮನೆಗೆ ಗ್ಯಾಸ್ ಪೂರೈಕೆ ಯೋಜನೆ ಅನುಷ್ಠಾನ ಹಂತದಲ್ಲಿದ್ದು, ಆದಷ್ಟು ಬೇಗ ಅನುಷ್ಠಾನಗೊಳಿಸುವಂತೆ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಹೇಳಿದರು.ಕೆಎಂಸಿಆರ್ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ. ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇದ್ದರು.