ಬಸವರಾಜ ಹೊರಟ್ಟಿಯವರು ಅಜಾತಶತ್ರು ರಾಜಕಾರಣಿಯಾಗಿದ್ದಾರೆ. ರಾಜ್ಯದ ಹಲವಾರು ಮುಖ್ಯಮಂತ್ರಿಗಳ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ.

ಗದಗ: ಸತತವಾಗಿ 8 ಬಾರಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ವಿಶ್ವದಾಖಲೆ ನಿರ್ಮಿಸಿ 45 ವರ್ಷ ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಡಿ. 13ರಂದು ಆಯೋಜಿಸಲಾಗಿದೆ ಎಂದು ಮುಖಂಡ ರವಿ ದಂಡಿನ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ ಹೊರಟ್ಟಿಯವರು ಅಜಾತಶತ್ರು ರಾಜಕಾರಣಿಯಾಗಿದ್ದಾರೆ. ರಾಜ್ಯದ ಹಲವಾರು ಮುಖ್ಯಮಂತ್ರಿಗಳ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕಾಗಿ ಶ್ರಮ ವಹಿಸಿದ ಏಕೈಕ ರಾಜಕಾರಣಿಯಾಗಿದ್ದಾರೆ. ಈ ಹಿನ್ನೆಲೆ ಅವರಿಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಪ್ರಮುಖರು ಸನ್ಮಾನಿಸಿ ಗೌರವಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಹೊರಟ್ಟಿ ಅವರು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಪಾಲಿಗೆ ಬೆಳಕಾಗಿ ಪರಿಹಾರ ನೀಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲ ಕಾರ್ಯಕ್ರಮಗಳಿಗೆ ಅವರು ಆಗಮಿಸಿ ಸಲಹೆ- ಸೂಚನೆ ನೀಡುತ್ತಾರೆ. ಜಗತ್ತು ಕಂಡ ಇಂತಹ ಅಪರೂಪದ ರಾಜಕಾರಣಿಗೆ ಗೌರವ ಸಲ್ಲಿಸುತ್ತಿದ್ದೇವೆ. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಬಸವರಾಜ ಹೊರಟ್ಟಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು. ಸಾನ್ನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಹಿಸಿಕೊಳ್ಳುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಭಾಧ್ಯಕ್ಷ ಯು.ಟಿ. ಖಾದರ ಸೇರಿದಂತೆ ಅನೇಕ ಗಣ್ಯರು ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಎಚ್.ಕೆ. ಪಾಟೀಲ, ಡಾ. ಎಂ.ಸಿ. ಸುಧಾಕರ, ಮಧು ಬಂಗಾರಪ್ಪ, ಶಿವಾನಂದ ಪಾಟೀಲ, ಮಂಕಾಳ ವೈದ್ಯ, ಆರ್.ವಿ. ದೇಶಪಾಂಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಪ್ರಭಾಕರ ಕೋರೆ, ವಿಜಯ ಸಂಕೇಶ್ವರ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಮೇಶ ಹಿರೇಮಠ, ಎಂ.ಕೆ. ಲಮಾಣಿ, ಎ.ಎಸ್. ಪಾಟೀಲ, ಬೂದಪ್ಪ ಅಂಗಡಿ, ಬಿ.ಕೆ. ನಿಂಬನಗೌಡ್ರ, ಗಿರೀಶ ನರಗುಂದ ಉಪಸ್ಥಿತರಿದ್ದರು.