ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ ಚಿತ್ರದುರ್ಗ ಲೋಕಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಬುಧವಾರ ಎಂಟ್ರಿ ಕೊಟ್ಟಿದ್ದಾರೆ.
ಬೆಳಿಗ್ಗೆ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ ಗೋವಿಂದ ಕಾರಜೋಳ ಅಲ್ಲಿಯೇ ಕುಳಿತು ಚುನಾವಣಾ ತಂತ್ರಗಳ ಬಗ್ಗೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಎಸ್.ಕೆ.ಬಸವರಾಜನ್, ದೇಶದ ಭದ್ರತೆ, ಸುರಕ್ಷತೆಗಾಗಿ ಮೋದಿಯವರ ಅಗತ್ಯವಿದೆ. ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರವರ ಗೆಲ್ಲಿಸಿ ಕಳಿಸಿಬೇಕಿದೆ ಎಂದರು.ಜೆಡಿಎಸ್ ನನ್ನ ಹಳೆಯ ಪಕ್ಷವಾಗಿದೆ. ಆ ಪಕ್ಷದಿಂದಲೇ ಗೆದ್ದು ತಾವು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದೆ. ಲೋಕಸಭೆ ಚುನಾವಣೆಗೆ ಹಳೆಯ ಕಾರ್ಯಕರ್ತರು, ನಾಯಕರು ಒಂದಾಗಿರುವುದು ಸಂತಸ ತಂದಿದೆ. ದೇಶವನ್ನು ಕಾಪಾಡುವ ಶಕ್ತಿ ಇರು ವುದು ನರೆಂದ್ರ ಮೋದಿಯವರಿಗೆ ಮಾತ್ರ. ಕಳೆದ 10 ವರ್ಷದಲ್ಲಿ ಹಲವಾರು ಕಠಿಣ ಸಂದರ್ಭದಲ್ಲಿ ಉತ್ತಮವಾದ ತೀರ್ಮಾನ ಗಳನ್ನು ತೆಗೆದುಕೊಳ್ಳುವುದರ ಮೂಲಕ ದೇಶ ಮತ್ತು ಜನತೆಯನ್ನು ರಕ್ಷಿಸಿದ್ದಾರೆ. ಬೇರೆ ದೇಶಗಳ ಯುದ್ಧಗಳನ್ನು ನಿಯಂತ್ರಿ ಸುವ ಶಕ್ತಿ ನರೇಂದ್ರ ಮೋದಿಯವರಿಗೆ ಇದೆ ಎಂದರು.
ಕಳೆದ 70 ವರ್ಷದಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ಆದರೆ 10 ವರ್ಷದಲ್ಲಿ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡು ವುದು ಕಷ್ಟವಾಗುತ್ತದೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶವನ್ನು 70 ವರ್ಷ ಆಡಳಿತ ಮಾಡಿದರೂ ಸಹ ಕಾಶ್ಮೀರವನ್ನು ಜೋಡಿಸುವ ಕಾರ್ಯ ಮಾಡಿರಲಿಲ್ಲ. ಅಲ್ಲಿ ಭಾರತದ ಧ್ವಜ ಹಾರಿಸದ ಪರಿಸ್ಥಿತಿ ಇತ್ತು. ಈ ಸಮಯದಲ್ಲಿ ಮೋದಿಯವರು ಧೈರ್ಯದಿಂದ ಕಾಶ್ಮೀರವನ್ನು ಭಾರತಕ್ಕೆ ಮರಳಿ ನೀಡಿದ್ದಾರೆ ಎಂದರು. ಕಾಂಗ್ರೆಸ್ ಭಾರತ್ ಜೋಡೋ ಬೂಟಾಟಿಕೆ ಯಾತ್ರೆ ಎಂದರು.ಮೋದಿಯವರಿಗೆ ಯಾವುದೇ ಸ್ವಾರ್ಥ ಇಲ್ಲ. ಕಳೆದ 10 ವರ್ಷದಲ್ಲಿ ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿ ದ್ದಾರೆ. ಇಂತಹ ಪ್ರಧಾನ ಮಂತ್ರಿ ಮುಂದೆ ಭಾರತಕ್ಕೆ ಸಿಗುವುದಿಲ್ಲ, ತಮ್ಮ ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಯಾವುದೇ ಹಗರಣದಲ್ಲಿ ಭಾಗಿಯಾಗದೆ ಬಿಳಿ ಹಾಳೆಯಂತೆ ಕೆಲಸವನ್ನು ದೇಶಕ್ಕಾಗಿ ಮಾಡುತ್ತಿದ್ದಾರೆ ಎಂದು ಬಸವರಾಜನ್ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ರವರು ಸಚಿವರಾಗಿ ಅನುಭವವನ್ನು ಹೊಂದಿದ್ದಾರೆ. ನೀರಾವರಿ, ಲೋಕೋಪ ಯೋಗಿ, ಸಮಾಜ ಕಲ್ಯಾಣ ಸಚಿವರಾಗಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಇಂತಹರ ಅನುಭವ ನಮಗೆ ಅಗತ್ಯ ವಾಗಿದೆ. ಇವರನ್ನು ಗೆಲ್ಲಿಸುವುದರ ಮೂಲಕ ನರೆಂದ್ರ ಮೋದಿಯವರ ಕೈ ಬಲ ಪಡಿಸಬೇಕಿದೆ. ದಲಿತ ಮುಖ್ಯಮಂತ್ರಿ ಎಂಬ ಕೂಗು ಬಂದರೆ ಅದಕ್ಕೆ ಕಾರಜೋಳರವರ ಹೆಸರು ಮುನ್ನಲೆಯಲ್ಲಿ ಇದೆ. ಯಡಿಯೂರಪ್ಪರವರು ನಮ್ಮೆಲ್ಲರ ಮೇಲೆ ಭರವಸೆಯನ್ನು ಇಟ್ಟು ಕಾರಜೋಳರವರನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಇವರೊಂದಿಗೆ ದೇವೇಗೌಡರು ಕೈಜೋಡಿಸಿರುವುದು ಆನೆ ಬಲ ಬಂದಂತೆ ಆಗಿದೆ ಎಂದು ಬಸವರಾಜನ್ ಹೇಳಿದರು.ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ದೇಶ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಈಗಿನವರೆಗೂ ಹಲವಾರು ಪ್ರಧಾನ ಮಂತ್ರಿಗಳನ್ನು ಕಂಡಿದ್ದೇವೆ. ಇದರಲ್ಲಿ ದೇಶವನ್ನು ಸಮರ್ಥವಾಗಿ ಆಳುವ ಶಕ್ತಿಯನ್ನು ನರೆಂದ್ರ ಮೋದಿಯವರು ಮಾತ್ರ ಹೊಂದಿದ್ದಾರೆ. ಯಾವುದೇ ರೀತಿಯ ಆಪಾದನೆಯನ್ನು ಹೊಂದದೆ ಸ್ವಜನ ಪಕ್ಷಪಾತ ಮಾಡದೇ ಕಳಂಕ ರಹಿತವಾದ ವ್ಯಕ್ತಿತ್ವ ಹೊಂದಿದ್ದಾರೆ. ಪ್ರಪಂಚದಲ್ಲಿ ಭಾರತದ ಕೀರ್ತಿ, ಗೌರವನ್ನು ಹೆಚ್ಚಿಸಿದ್ದು ಮೋದಿಯವರು ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಮೋಸದಾಟ. ಚುನಾವಣೆಗೂ ಮುನ್ನ ಅಭಿವೃದ್ಧಿ ಕಾರ್ಯಗಳ ಭರವಸೆ ನೀಡಿದ್ದರು. ಈಗ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರು ಮತಯಾಚನೆಗೆ ಹಳ್ಳಿಗಳಿಗೆ ಹೋಗಲು ಹೆದರುತ್ತಿದ್ದಾರೆ. ಇದುವರೆಗೂ ಅಭಿವೃದ್ದಿ ಮಾಡಲು ಅವರಿಗೆ ಒಂದು ರುಪಾಯಿ ಕೊಟ್ಟಿಲ್ಲ. ಎಲ್ಲಾ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಒಂದೂ ಕೆಲಸ ಆಗುತ್ತಿಲ್ಲ . ಮಂತ್ರಿಗಳು ಏಜೆಂಟರು ಹೇಳಿದಂತೆ ಕೇಳುತ್ತಿದ್ದಾರೆಂದು ಕೈ ಶಾಸಕರೇ ದೂರುತ್ತಿದ್ದಾರೆಂದು ಕಾರಜೋಳ ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಮಾಜಿ ಶಾಸಕ ಪ್ರೊ.ಲಿಂಗಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಪಂ ಮಾಜಿ ಸದಸ್ಯ ಲಕ್ಷ್ಮಣಪ್ಪ, ಮಠದಹಟ್ಟಿ ವೀರಣ್ಣ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಾಜರೆಡ್ಡಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಂತರ ಗೋವಿಂದ ಕಾರಜೋಳರವರು ತಮಟಗಲ್ಲು ವೀರಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕಾಲೋನಿಗಳಿಗೆ ತೆರಳಿ ಮತಯಾಚನೆ ಮಾಡಿದರು