ಬಸವೇಶ್ವರ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

| Published : May 11 2024, 12:02 AM IST

ಸಾರಾಂಶ

ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವಿಶಾಲ್ ಕುಮಾರ್, ತಹಸೀಲ್ದಾರರಾದ ರಮೇಶ್ ಬಾಬು ಅವರು ಬಸವೇಶ್ವರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವಿಶಾಲ್ ಕುಮಾರ್, ತಹಸೀಲ್ದಾರರಾದ ರಮೇಶ್ ಬಾಬು ಅವರು ಬಸವೇಶ್ವರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿ.ಪಂ. ಸಿಇಒ ವರ್ಣಿತ್ ನೇಗಿ, ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವಣ್ಣ ಅವರ ಚಿಂತನೆಗಳು ಸಾರ್ವಕಾಲಿಕವಾದುದು. 12ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ ವಚನಗಳ ಮೂಲಕ ಜಾಗೃತಿ ಮೂಡಿಸಿದರು ಎಂದರು. ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಿದರು. ಬಸವೇಶ್ವರರು ವಚನಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಬಸವಾದಿ ಶರಣರು ವಚನಕಾರರ ಬಗ್ಗೆ ಅಧ್ಯಯನ ಮಾಡಬೇಕು. ಜೊತೆಗೆ ಸದಾ ಸ್ಮರಿಸಬೇಕು. ಬಸವಣ್ಣನವರ ಸಾಮಾಜಿಕ ಸುಧಾರಣೆಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳು, ಚಿಂತನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಭಾರತ ಸಂಸತ್ತಿನಲ್ಲಿ ಹಾಗೂ ಲಂಡನ್‍ನಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಿರುವುದೇ ಸಾಕ್ಷಿ ಎಂದರು.

ಬಸವೇಶ್ವರರು ಕನ್ನಡ ನಾಡಿನ ಸಂಸ್ಕೃತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕ. ವಚನಕಾರರ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವದ ಅಡಿಗಲ್ಲೇ ಆಗಿದೆ. ನಾಡಿನ ಸಾಂಸ್ಕೃತಿಕ, ಸಾಹಿತ್ಯಕ, ಪರಂಪರೆ ವಿಶ್ವಕ್ಕೆ ಕೊಡುಗೆ ನೀಡಿರುವ ವಿಶ್ವ ಮಾನವ ಪರಂಪರೆಯ ಬಹುಮುಖ್ಯವಾದ ಕೊಂಡಿಯಾಗಿದ್ದಾರೆ ಎಂದು ಜಿಪಂ ಸಿಇಒ ಅಭಿಪ್ರಾಯಪಟ್ಟರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಮಾತನಾಡಿ ಬಸವೇಶ್ವರರು ಅನೇಕ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು, ಆ ನಿಟ್ಟಿನಲ್ಲಿ ಬಸವೇಶ್ವರರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ. ಅಜ್ಞಾನದ ಕಾಲದಲ್ಲಿ ಜ್ಯೋತಿ ಆಗಿ ಕಾಣಿಸಿಕೊಂಡ ಬಸವೇಶ್ವರರು, ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದು ಹೇಳಿದರು.