ಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದ ವಿವಿಧೆಡೆ ಸಂಭ್ರಮ ಸಡಗರದಿಂದ ಶ್ರೀ ಬಸವೇಶ್ವರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.ನಗರದ ಅಂಬೇವಾಡಿಯಲ್ಲಿರುವ ತಾಲೂಕಾಡಳಿತ ಸಭಾಭವನದಲ್ಲಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆರಂಭದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ಗೌರವ ಸಲ್ಲಿಸಲಾಯಿತು. ತಾಲೂಕಾಡಳಿತದ ಪರ ಪಾರ್ವತಿ ಕುರುಗುಂದ, ಶಾರದಾ ಹಿರೇಮಠ, ವೀರಪ್ಪ ಕಲ್ಯಾಣಿ, ಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬಸವೇಶ್ವರರ ತತ್ವಾದರ್ಶಗಳ ಕುರಿತಂತೆ ಸಿದ್ದಪ್ಪ ಕುರುಗುಂದ, ಗುರು ಮಠಪತಿ ಸಂದರ್ಭೋಚಿತವಾಗಿ ಮಾಡನಾಡಿದರು.
ಈ ಸಂದರ್ಭ ತಾಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ, ಸಮಾಜ ಬಾಂಧವರು ಉಪಸ್ಥಿತರಿದ್ದರು.ಸನಗರಸಭೆಯ ಸಭಾಭವನದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೌರಾಯುಕ್ತ ವಿವೇಕ ಬನ್ನೆ ಪುಷ್ಪ ಗೌರವ ಸಲ್ಲಿಸಿದರು. ಈ ಸಂದರ್ಭ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.ಕೋಗಿಲಬನದ ಶ್ರೀ ಮೃತ್ಯುಂಜ ಮಠ, ಹಾಗೂ ಶ್ರೀ ವೀರಶೈವ ಸೇವಾ ಸಮಿತಿ, ಶ್ರೀ ಜಗಜ್ಯೋತಿ ಬಸವೇಶ್ವರ ಸಮಿತಿ ಮತ್ತು ವಿವಿಧ ಸಂಘಟನೆಗಳ ಆಶ್ರಯದಡಿಕೋಗಿಲಬನದ ಶ್ರೀ ಮೃತ್ಯುಂಜಯ ಮಠದಿಂದ ಜಗಜ್ಯೋತಿ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯು ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪಟೇಲ ವೃತ್ತದ ಹತ್ತಿರ ಇರುವ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಆವರಣದಲ್ಲಿ ಸಂಪನ್ನಗೊಂಡಿತು. ನಂತರ ಶ್ರೀ ಬಸವೇಶ್ವರರ ಮೂತಿಗೆ ಮಾಲಾರ್ಪಣೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಕಲಶೇಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಜಗಜ್ಯೋತಿ ಬಸವೇಶ್ವರ ಸಮಿತಿಯ ಅಧ್ಯಕ್ಷ ನಿಂಗನಗೌಡ ಪಾಟೀಲ ಹಾಗೂ ಪದಾಧಿಕಾರಿಗಳು, ಸದಸ್ಯರು, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಘಟಕಾಧ್ಯಕ್ಷ ಸಿದ್ದಪ್ಪ ಕುರುಗುಂದ ಹಾಗೂ ಪದಾಧಿಕಾರಿಗಳು, ಸದಸ್ಯರು, ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ತಾಲೂಕಾಡಳಿತ ಮತ್ತು ಪೌರಾಡಳಿತ ಪರವಾಗಿ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ವಿವೇಕ ಬನ್ನೆ ಮತ್ತು ತಾಪಂ ಇಒ ಟಿ.ಸಿ. ಹಾದಿಮನಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ನಂತರ ಮೃತ್ಯುಂಜಯ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪಾಲ್ಗೊಂಡಿದ್ದರು.