ಸಾರಾಂಶ
ಕಲ್ಯಾಣಿ ಚಾಲುಕ್ಯ ಅರಸರ ಕಾಲದಲ್ಲಿ ನಿರ್ಮಾಣವಾದ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವವು ಶ್ರಾವಣ ಕೊನೆ ಸೋಮವಾರ ಸಂಜೆ ಸಾವಿರಾರು ಭಕ್ತಾಧಿಗಳ ಭಕ್ತಿ ಭಾವದ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಗದಗಕಲ್ಯಾಣಿ ಚಾಲುಕ್ಯ ಅರಸರ ಕಾಲದಲ್ಲಿ ನಿರ್ಮಾಣವಾದ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವವು ಶ್ರಾವಣ ಕೊನೆ ಸೋಮವಾರ ಸಂಜೆ ಸಾವಿರಾರು ಭಕ್ತಾಧಿಗಳ ಭಕ್ತಿ ಭಾವದ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಬಜಾರ ರಸ್ತೆಯಲ್ಲಿ ಸಾಗಿದ ರಥೋತ್ಸವಕ್ಕೆ ಅಡ್ನೂರ ಬ್ರಹ್ಮನ್ಮಠದ ಶಿವಾಚಾರ್ಯರು ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳು ತೇರಿಗೆ ಉತ್ತತ್ತಿ ಎಸೆದು ತಮ್ಮ ಭಕ್ತಿಯ ಸಂಕಲ್ಪವನ್ನು ಅರ್ಪಿಸಿದರು. ರಥೋತ್ಸವದಲ್ಲಿ ಭಾಗಿಯಾದ ಡೊಳ್ಳು ಕಲಾ ತಂಡದ ಡೊಳ್ಳು ಕುಣಿತದ ಪ್ರದರ್ಶನ ಗಮನ ಸೆಳೆಯಿತು.ಆಕರ್ಷಿಸಿದ ಶರಣರ ಮೆರವಣಿಗೆ:ಶ್ರೀ ಕೃಷ್ಣ ,ಬಸವೇಶ್ವರರು, ಅಲ್ಲಮಪ್ರಭುಗಳು, ಅಕ್ಮಹಾದೇವಿ, ಮರುಳ ಸಿದ್ದೇಶ್ವರರು, ಮಾರುತಿ, ಮಹಾಂತೇಶ್ವರ, ಮಲ್ಲಿಕಾರ್ಜುನ, ಲೆಕ್ಕದ ವೀರೇಶ್ವರ, ನಾಗಲಿಂಗೇಶ್ವರ, ಅನ್ನದಾನೀಶ್ವರರು, ಪಂಚಾಚಾರ್ಯರು ಸೇರಿದಂತೆ ನಾಡಿನ ಹಲವಾರು ಶಿವ ಶರಣರು ಭಾವಚಿತ್ರಗಳ ಮೆರವಣಿಗೆಯು ಜನ ಮನ ಸೆಳೆಯಿತು. ಗ್ರಾಮದ 11 ವಾರ್ಡ್‌ಗಳ 13 ಭಜನಾ ಕಲಾ ತಂಡಗಳು ತಮ್ಮ ಇಷ್ಟ ದೇವರ ಭಾವಚಿತ್ರ ಮೆರವಣಿಗೆಯೊಂದಿಗೆ ತತ್ವ ಪದ, ಜಾನಪದ, ಸುಗ್ಗಿ ಪದ, ಭಕ್ತಿ ಪದಗಳನ್ನು ಹಾಡುತ್ತಾ ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರವನ್ನು ಸಂಭ್ರಮಿಸಿದರು.ಗ್ರಾಮ ಪಂಚಾಯತಿಯು ಪ್ರತಿ ಭಜನಾ ಸಂಘಕ್ಕೆ ಸಂಪ್ರಾದಾಯದಂತೆ ಡಗ್ಗಾ ವಾದ್ಯ ಹಾಗೂ 10 ಕೆಜಿ ಬೆಲ್ಲವನ್ನು ಕೊಡುಗೆಯಾಗಿ ನೀಡಿದರು.ಮೃತ್ಯುಂಜಯ ಹೋಮ:ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನಪೂರ್ಣಿಶ್ವರಿ ಸತ್ಸಂಗ ಸಮಿತಿಯ ಆಶ್ರಯದಲ್ಲಿ ರಾಘವೇಂದ್ರ ಕೊಪ್ಪಳ ಗುರೂಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮೃತ್ಯುಂಜಯ ಹೋಮ ನೆರವೇರಿತು.
ಈ ಸಂದರ್ಭದಲ್ಲಿ ಅನ್ನಪೂರ್ಣಿಶ್ವರಿ ಪೂಜಾ, ಸತ್ಸಂಗದೊಂದಿಗೆ ಭಜನಾ ಕಾರ್ಯಕ್ರಮಗಳು ನೆರವೇರಿದವು. ಇದಕ್ಕೂ ಪೂರ್ವ ಬಸವೇಶ್ವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ರುದ್ರಾಭೀಷೇಕ ಕಾರ್ಯಕ್ರಮ ನಡೆಯಿತು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಸರ್ವ ಧರ್ಮದವರು ಪಾಲ್ಗೊಂಡು ಶತಮಾನ ಕಂಡ ಐತಿಹಾಸಿಕ ಹಾಲಗೊಂಡ ಬಸವೇಶ್ವರ ಜಾತ್ರೆಯನ್ನು ಭಕ್ತಿ ಭಾವದಿಂದ ಆಚರಿಸಿ ಯಶಸ್ವಿಗೊಳಿಸಿದ್ದು ಸಾವಿರಾರು ಭಕ್ತರು ತನು, ಮನ ಧನದಿಂದ ಭಾಗವಹಿಸಿದ್ದರು ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಮಹೇಶ ಮುಸ್ಕಿನಬಾವಿ ಹೇಳಿದರು.