ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಭಾವೈಕ್ಯತೆಯ ಭಗವಂತನಾಗಿ, ಈ ಜಗದ ಜನರ ಕಾಳಿಕೆಯನ್ನು ಕಳೆದು ಬದುಕನ್ನುದ್ಧರಿಸಿದ ಜಗದೊಡೆಯ ವಿಶ್ವಾರಾಧ್ಯರ ಆಧ್ಯಾತ್ಮಿಕ ಬಾಳು ಬೆಳಗಿದ ಬಸವಾಂಬೆ ಮಹಾಸಾಧ್ವಿ ಶಿರೋಮಣಿ ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಹೇಳಿದರು.ಅಬ್ಬೆತುಮಕೂರಿನ ಶ್ರೀಮಠದಲ್ಲಿ ನಡೆದ ಬಸ್ಸಮ್ಮ ತಾಯಿಯ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ವಿಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿ ಸಂಸಾರದಲ್ಲಿದ್ದರೂ ಎಂದು ಸಂಸಾರವನ್ನು ಸಂಪರ್ಕಿಸಿಕೊಳ್ಳಲಿಲ್ಲ. ಜಲ ಪತ್ರದ ಮೇಲಿನ ಬಿಂದುವಿನಂತೆ ನಶ್ವರವಾದ, ಭೋಗಮಯ ಬದುಕನ್ನು ನಂಬದೇ ಪರಮಾರ್ಥಿಕ ಬದುಕನ್ನು ಬಾಳಿ ಈ ಜಗವನ್ನು ಉದ್ದರಿಸಿದ ಮಹಾ ಮಹಿಮ ವಿಶ್ವಾರಾಧ್ಯರ ಪತ್ನಿ ಬಸ್ಸಮ್ಮ ತಾಯಿಯ ಜಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರು ಪುಣ್ಯವಂತರೆಂದರು.
ಇದಕ್ಕೂ ಮುನ್ನ ವಿಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿಯವರ ಮೂರ್ತಿಗಳ ಮೆರವಣಿಗೆ ಹಲಗೆ, ಡೊಳ್ಳು, ಬಾಜಾ ಭಜಂತ್ರಿ ಮತ್ತು ಸುಮಂಗಲಿಯರ ಕಳಸದೊಂದಿಗೆ ಪುರವಂತರ ಸೇವೆಯ ಮಧ್ಯೆ ಶ್ರೀಮಠದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ಬಸ್ಸಮ್ಮ ತಾಯಿಯ ರಥೋತ್ಸವ ವೈಭವದಿಂದ ಜರುಗಿತು.ರಥೋತ್ಸವದಲ್ಲಿ ಪಾಲ್ಗೊಂಡ ಅನೇಕ ಭಕ್ತರು ಕಾರಿಕಾ, ಉತ್ತುತ್ತಿ ಹಾಗೂ ಬಾಳೆಹಣ್ಣುಗಳನ್ನು ಭಕ್ತಿಯಿಂದ ರಥಕ್ಕೆ ಎಸೆದು ಕೃತಾರ್ಥರಾದರು. ನಂತರ ವಿಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿಯವರ ಕಲ್ಯಾಣ ಮಹೋತ್ಸವ ಜರುಗಿತು.
ಅನೇಕ ಶಿಷ್ಯ ವೃಂದದವರು ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿವರಿಗೆ ಭಕ್ತಿ ಪೂರ್ವಕವಾಗಿ ಸತ್ಕರಿಸಿದರು. ಜಾತ್ರಾ ಮಹೋತ್ಸವದ ವಿವಿಧ ಸೇವಾರ್ಥಿಗಳಿಗೆ ಮತ್ತು ದಾಸೋಹಿಗಳಿಗೆ ಶ್ರೀಗಳು ಸತ್ಕರಿಸಿ, ಆಶೀರ್ವದಿಸಿದರು.ರಥೋತ್ಸವ ಪೂಜೆಯನ್ನು ಡಾ. ಗಂಗಾಧರ ಸ್ವಾಮೀಜಿ ನೆರವೇರಿಸಿದರು. ಕಾಡಂಗೇರಾ ಸದ್ಭಕ್ತ ಮಂಡಳಿಯವರು ಪ್ರಸಾದ ಸೇವೆ ಮಾಡಿದರು. ಐಕೂರು ಭಜನಾ ಮಂಡಳಿಯಿಂದ ಆಹೋರಾತ್ರಿ ಭಜನಾ ಕಾರ್ಯಕ್ರಮ ನೆರವೇರಿತು. ಜಾತ್ರಾಮಹೋತ್ಸವದ ನಂತರ ಕೈಕುಸ್ತಿಗಳು ನಡೆದವು. ಕೈಕುಸ್ತಿಯಲ್ಲಿ 3 ಜನರನ್ನು ಗೆದ್ದವರಿಗೆ ತೆಂಗಿನಕಾಯಿ, 5 ಜನರನ್ನು ಗೆದ್ದವರಿಗೆ ಬೆಳ್ಳಿಯ ಕಡಗವನ್ನು ತೊಡಿಸಿ ಗೌರವಿಸಲಾಯಿತು. ಉಸುಕಿನ ಚೀಲ ಎತ್ತುವ ಸ್ಪರ್ಧೆಯನ್ನು ನಡೆಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ನೀಡಿ ಸತ್ಕರಿಸಲಾಯಿತು.
ಚೆನ್ನಪ್ಪಗೌಡ ಮೋಸಂಬಿ, ನರಸನಗೌಡ ರಾಯಚೂರ, ಡಾ. ಸುಭಾಶ್ಚಂದ್ರ ಕೌಲಗಿ ಸೇರಿದಂತೆ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತರು ಪಾಲ್ಗೊಂಡಿದ್ದರು.