ಸಾರಾಂಶ
ಅಭಯ ಹಸ್ತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಗಂಗಾವತಿ
ಹಳೇ ಅಯೋಧ್ಯ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಹಳೇ ಅಯೋಧ್ಯ ಗ್ರಾಮದಲ್ಲಿ ಅಭಯ ಹಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಭರವಸೆ ನೀಡಿದಂತೆ ಕೆಲಸ ಮಾಡಿಕೊಡುವ ವ್ಯಕ್ತಿಯಾಗಿದ್ದು, ಎಲ್ಲರಂತೆ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಎಲ್ಲ ಕೆಲಸ ಮಾಡಿರುವುದಲ್ಲದೆ 5 ಗ್ಯಾರಂಟಿ ಜಾರಿಯಾಗಿರುವುದೇ ಸಾಕ್ಷಿ ಎಂದರು.
ಗ್ರಾಮದಲ್ಲಿ ರೇಷನ್ ವಿತರಣಾ ಕೇಂದ್ರ ಸ್ಥಾಪನೆ, ರಸ್ತೆ ನಿರ್ಮಾಣ, ಮತದಾನ ಕೇಂದ್ರ ಮಾಡಿಕೊಡಲಾಗುತ್ತಿದೆ. ಇನ್ನು 6 ತಿಂಗಳಲ್ಲಿ ಬಸ್ ಬರುವಂತೆ ಮಾಡಿ ತೋರಿಸುತ್ತೇನೆ ಎಂದರು. ಇಲ್ಲಿಯ ಮಸೀದಿಗೆ ₹5 ಲಕ್ಷ ಅನುದಾನ ನೀಡಿದ್ದು, ಸಮಿತಿ ರಚನೆಯಾದ ತಕ್ಷಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಸಚಿವ ಶಿವರಾಜ ತಂಗಡಗಿ ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿವೆ ಎಂದರು.
ಇದೇ ವೇಳೆ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.ತಹಸೀಲ್ದಾರ ನಾಗರಾಜ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಗ್ರಾಪಂ ಅಧ್ಯಕ್ಷ ನೇತ್ರಾವತಿ ವೆಂಕೋಬ ಬಂಗಿ, ಉಪಾಧ್ಯಕ್ಷ ನಾಗಪ್ಪ ಬಲ್ಕುಂದಿ, ಗ್ರಾಪಂ ಪಿಡಿಒ ಮಲ್ಲಿಕಾರ್ಜುನ ಕಡಿವಾಳ, ಮುಖಂಡರಾದ ರೇಣುಕನಗೌಡ, ವಿ.ಶ್ರೀನಿವಾಸ್, ನಾಗೇಂದ್ರ, ಬಾಷಾ, ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಗ್ರಾಪಂ ಎಲ್ಲ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು, ಗ್ರಾಪಂ ಕಾರ್ಯದರ್ಶಿರವೀಂದ್ರ ಕುಲಕರ್ಣಿ, ತಾಲೂಕು ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿ, ಐಇಸಿ ಸಂಯೋಜಕರು ಇದ್ದರು.