ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಆರೋಗ್ಯ ಮತ್ತು ಶಿಕ್ಷಣವನ್ನು ಪ್ರತಿಯೊಬ್ಬ ನಾಗರಿಕರನೂ ಪಡೆಯಬೇಕೆಂಬ ಸಂವಿಧಾನ ಬದ್ಧವಾದ ಹಕ್ಕನ್ನು ಈವರೆಗೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ವಿಷಾಧ ವ್ಯಕ್ತಪಡಿಸಿದರು.ನಗರದ ವಿಜಯಪುರದಲ್ಲಿ ಆರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಪಟ್ಟಣ ಪ್ರದೇಶದಲ್ಲಿ ಈ ಆಸ್ಪತ್ರೆ ಸಾರ್ವಜನಿಕವಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕೆಂಬುದು ಆಶಯವಾಗಿದೆ. ಆದರೆ ಇಲ್ಲಿ 24x7 ಅವಧಿವರೆಗೆ ವೈದ್ಯರು ಮತ್ತು ದಾದಿಯರು ಇರುವುದರ ಜೊತೆಗೆ ಉತ್ತಮ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.
ನಗರದ ನಾಗರಿಕರು ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿ ಆರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನದ ಜೊತೆಗೆ ಸಿಎಸ್‌ಆರ್ ಅನುದಾನ ಬಳಸಿ ಹಿರೇಮಗಳೂರು ಆಸ್ಪತ್ರೆ ಮಾದರಿಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಉದ್ಘಾಟನೆಯಾಗಲಿದೆ. ಮೆಡಿಕಲ್ ಕಾಲೇಜು ಕಾಮಗಾರಿ ಈ ವರ್ಷ ಸಂಪೂರ್ಣವಾಗಿ ಮುಗಿಸಿ ಲೋಕಾರ್ಪಣೆಗೊಳ್ಳಲಿದೆ ಎಂದರು. ಉತ್ತಮ ಗುಣಮಟ್ಟದ ಚಿಕಿತ್ಸೆ ಸ್ಥಳೀಯ ಆಸ್ಪತ್ರೆಗಳಲ್ಲಿ ದೊರೆಯಬೇಕೆಂಬ ಉದ್ದೇಶದಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇಂದು ಆರಂಭಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಪಡೆಯುವುದು ಸವಾಲಾಗಿದ್ದು, ಹಿಂದೆ ಪ್ರಕೃತಿ ಜೊತೆ ಹೊಂದಿಕೊಂಡ ಪರಿಣಾಮ ಆರೋಗ್ಯವಾಗಿ ಆನಂದದಿಂದ ಇದ್ದರು ಎಂದು ಹೇಳಿದರು.ಈಗ ವಿಜ್ಞಾನ ಮುಂದುವರೆದಿದೆ, ಹೊಸ ಹೊಸ ಚಿಕಿತ್ಸಾ ವಿಧಾನಗಳನ್ನು ಕಂಡುಕೊಳ್ಳಲಾಗಿದೆ. ಇದಕ್ಕೆ ಸವಾಲಾಗಿ ರೋಗಗಳು ಹೆಚ್ಚಾಗುತ್ತಿವೆ. ಹಿಂದೆ ಡೆಂಘೀ ಜ್ವರ ಕೇಳಿರಲಿಲ್ಲ. ಪ್ಲೇಟ್ ಲೇಟ್ಸ್ ಹೆಸರೇ ಗೊತ್ತಿರಲಿಲ್ಲ. ಜೀವನ ಪದ್ಧತಿ ಆರೋಗ್ಯದಲ್ಲಿ ಬದಲಾವಣೆಗಳು ಆಗಿರುವುದು ಪರಿಸರದ ಮೇಲೆ ಆಗಿರುವ ದುಷ್ಪರಿಣಾಮ ಪ್ರಮುಖ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸೇವೆ ಪಡೆಯಲು ಸಾರ್ವಜನಿಕರು ಈ ಆಸ್ಪತ್ರೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವೈದ್ಯೋ ನಾರಾಯಣ ಹರಿ ಎಂದರೆ ಸಾಲದು. ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾದಾಗ ಅವರಿಗೆ ತಪ್ಪಿನ ಅರಿವು ಆಗುತ್ತದೆ. ಇದು ಆಗದಿದ್ದರೆ ವೈದ್ಯರ ನೈತಿಕ ಶಕ್ತಿ ಕುಂದಿಸಿದಂತಾಗುತ್ತದೆ ಎಂದು ವೈದ್ಯರಿಗೆ ಧೈರ್ಯ ತುಂಬಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ನಗರಸಭೆ ಸದಸ್ಯ ಸಿ.ಪಿ. ಲಕ್ಷ್ಮಣ, ಯಮುನಾ ಚನ್ನಬಸಪ್ಪ ಶೆಟ್ಟಿ, ತಾರಾ ಭೋಜೇಗೌಡ ಉಪಸ್ಥಿತರಿದ್ದರು. ಪಂಚಾಕ್ಷರಿ ಸ್ವಾಗತಿಸಿದರು.