ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಗೋಧೂಳಿ ಮೋಡ ಕವಿದ ವಾತಾವರಣದಲ್ಲೂ ಕೂಡಿಬಂದ ಬಾಸಿಂಗಬಲ, ಧರೆಗಿಳಿದ ಶಿವ ಪಾರ್ವತಿಯರು, ಅಪರೂಪದ ಪ್ರೇಮಕಥೆಗೆ ಮನಸೋತ ಕೋಟೆಯ ಜನತೆ. ನಗರದಲ್ಲಿ ಶನಿವಾರ ಸಂಜೆ ಕಂಡುಬಂದ ದೃಶ್ಯಗಳಿವು. ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಂಗಕರ್ಮಿ, ದಿ.ಪಿ.ಎ. ಕುಲಕರ್ಣಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ವಾಸುದೇವ ವಿನೋದಿನಿ ನಾಟ್ಯಸಭೆ ಹಮ್ಮಿಕೊಂಡಿದ್ದ ಬಾಸಿಂಗಬಲ ನಾಟಕ ಕಲಾಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸಿತು.ಅಣ್ಣನ ಮಗನ ಮದುವೆಗೆ ಬಾಸಿಂಗ ತರಲು ಹೊರಟಿದ್ದ ವಿಧವೆ ಸಣ್ಣೇರಿ, ಅದೇ ಸಮಯಕ್ಕೆ ಅಲ್ಲಿ ಬಂದ ಮಲಕಾಜಿ ನಡುವೆ ಪ್ರೇಮಾಂಕುರವಾದ ಅಪರೂಪದ ಕಥೆ. ಖಾಸಗಿ ಬಸ್‌ನಲ್ಲಿ ಮುಂದುವರಿದಾಗ ನೆರೆದವರೆಲ್ಲ ಚೆಪ್ಪಾಳೆಯೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸಿದರು. ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಆಕಾಶ ಮಾರ್ಗವಾಗಿ ಸಂಚರಿಸುತ್ತಿದ್ದ ಶಿವ-ಪಾರ್ವತಿ ಧರೆಗಿಳಿದು ಬಂದು ಆಶೀರ್ವದಿಸಿದಾಗ ಸಣ್ಣೇರಿ ಹಾಗೂ ಮಲಕಾಜಿ ನಡುವೆ ಬಾಸಿಂಗಬಲ ಕೂಡಿ ಬಂದು ನಾಟಕಕ್ಕೆ ತೆರೆಬಿದ್ದಾಗ ಚಪ್ಪಾಳೆಗಳ ಸುರಿಮಳೆ.
ಶ್ರೀನಿವಾಸ ವೈದ್ಯರ ಕಥೆ ಆಧಾರಿತ ಈ ನಾಟಕವನ್ನು ಜಾಕೀರ್ ನದಾಫ್ ನಿರ್ದೇಶಿಸಿದ್ದರು. ಬೆಳಗಾವಿ ಜಿಲ್ಲೆಯ ಸವದತ್ತಿಯ ರಂಗ ಆರಾಧಾನಾ ಸಾಂಸ್ಕೃತಿಕ ತಂಡದವರು ಮನಮೋಹಕವಾಗಿ ನಟಿಸಿದರು. ಸೀಮಾ ವನಕಿ, ಅಕ್ಷತಾ ಮೇಲಗಿರಿ, ಕಾಶಪ್ಪ ಜಂಬೂದ್ವೀಪ, ಗೋಪಾಲ ಫಾಸಲಕರ್, ಸಿದ್ದು ಕಟಿಗೆನ್ನನವರ, ಗಣೇಶ ಬಜೇರಿ, ಚಂದ್ರಶೇಖರ ಪಠಾಣಿ, ಶ್ರೀನಿವಾಸ ಗದಗ, ಚಿದಂಬರ ಪಾಟೀಲ, ನಾರಾಯಣ ಗೋಂಧಳಿ ಮನಮೋಹಕ ಕಲೆಯ ಮೂಲಕ ರಂಜಿಸಿದರು. ಆನಂದ ಏಣಗಿ ನಾಟಕ ಪ್ರದರ್ಶನಕ್ಕೆ ಬೆಳಕು ನೀಡಿದರು.------------ಬಾಕ್ಸ್--------------
ರಂಗಭೂಮಿ ಕಲೆ ಉಳಿಸಿಪುಣ್ಯಸ್ಮರಣೆ ನಿಮಿತ್ತ ನಾಟಕ ಪ್ರದರ್ಶನ ಹಮ್ಮಿಕೊಂಡು ಅಗಲಿದ ಹಿರಿಯ ಚೇತನರಿಗೆ ಗೌರವ ಸಲ್ಲಿಸಿ ರಂಗಭೂಮಿ ಕಲೆ ಉಳಿಸಲು ಮುಂದಾದ ವಾಸುದೇವ ವಿನೋದಿನಿ ನಾಟ್ಯ ಸಭೆಯ ಕಾರ್ಯ ಶ್ಲಾಘನೀಯ ಎಂದು ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಾಸುದೇವ ವಿನೋದಿನಿ ನಾಟ್ಯಸಭೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಬಾಸಿಂಗಬಲ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪೂರ ಮಾತನಾಡಿ, ಜಿಲ್ಲೆಯಲ್ಲಿ ಇಂಥ ಕಲೆಗಳನ್ನು ನಿರಂತರ ಹಮ್ಮಿಕೊಂಡು ಕಲಾವಿದರು ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು. ಇದಕ್ಕೆ ನಮ್ಮ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಎಲ್ಲರೂ ನಾಟಕ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾಡಳಿತ ಕಚೇರಿಯ ಹಿರಿಯ ತಾಂತ್ರಿಕ ನಿರ್ದೇಶಕ ವಿ. ಗಿರಿಯಾಚಾರ್ ಪಕ್ವಾನ್ ಸಮೂಹ ಸಂಸ್ಥೆ ಮುಖ್ಯಸ್ಥ ಪವನ್ ಸೀಮಿಕೇರಿ, ವಾಸುದೇವ ವಿನೋದಿನಿ ನಾಟ್ಯ ಸಭೆ ಕಾರ್ಯದರ್ಶಿ ಲಕ್ಷ್ಮೀ ನಾರಾಯಣಾಚಾರ್ ಗುಡಿ, ಅನಿರುದ್ಧ ಕುಲಕರ್ಣಿ ವೇದಿಕೆ ಮೇಲಿದ್ದರು. ಕಲಾವಿದ ಅನಂತ ಪುರೋಹಿತ ಸ್ವಾಗತಿಸಿದರು. ಶಶಿ ದೇಶಪಾಂಡೆ ವಂದಿಸಿದರು. ಸಚಿನ್ ದೇಸಾಯಿ ನಿರೂಪಿಸಿದರು.ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ನಾಟಕಗಗಳ ಬಗ್ಗೆ ಯುವಪೀಳಿಗೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ 97 ವರ್ಷಗಳಷ್ಟು ಹಳೆಯದಾದ ನಗರದ ವಾಸುದೇವ ವಿನೋದಿನಿ ನಾಟ್ಯ ಸಭೆ ನಾಟಕ ಕಲೆ ಉಳಿಸಲು ಯತ್ನಿಸುತ್ತಿರುವುದು ಸ್ತುತ್ಯಾರ್ಹ. ಈ ಸಂಸ್ಥೆ ಶತಮಾನೋತ್ಸವ ಭವ್ಯವಾಗಿ ಆಚರಿಸಿ ರಂಗಭೂಮಿಗೆ ಇನ್ನಷ್ಟು ಕೊಡುಗೆ ಸಲ್ಲಿಸಲಿ.
- ಅಮರೇಶ ನಾಯಕ ಜಿಪಂ ಉಪಕಾರ್ಯದರ್ಶಿ