ಹಿರೇಸಿಂದೋಗಿ ಜಿಪಂ ಕ್ಷೇತ್ರಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇದಕ್ಕೆ ಆಕ್ಷೇಪಣೆಗೆ ಆಹ್ವಾನ ಮಾಡಿದ್ದರೂ ಕಸರತ್ತು ಜೋರಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಹಿರೇಸಿಂದೋಗಿ ಜಿಪಂ ಕ್ಷೇತ್ರಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇದಕ್ಕೆ ಆಕ್ಷೇಪಣೆಗೆ ಅಹ್ವಾನ ಮಾಡಿದ್ದರೂ ಕಸರತ್ತು ಜೋರಾಗಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಪ್ರಯತ್ನ ಆರಂಭಿಸಿದ್ದು, ಅದರಲ್ಲೂ ಬಿಜೆಪಿ–ಜೆಡಿಎಸ್‌ ಮೈತ್ರಿಯಲ್ಲಿ ಕ್ಷೇತ್ರ ಯಾರ ಪಾಲಾಗಲಿದೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳು: ಕಾಂಗ್ರೆಸ್‌ ಪಾಳಯದಲ್ಲಿ ಕೇಶವರಡ್ಡಿ ಮಾದಿನೂರು ಹೆಸರು ಮುಂಚೂಣಿಯಲ್ಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇವರನ್ನೇ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ತೀರ್ಮಾನವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಅಧಿಕೃತವಾಗಿ ಪ್ರಕಟವಾಗಿಲ್ಲ. ವೆಂಕನಗೌಡ ಹಿರೇಗೌಡ್ರ ಹಾಗೂ ಗಾಳೆಪ್ಪ ಪೂಜಾರಿ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇದರ ನಡುವೆ ಸೋಮಶೇಖರ ಹಿಟ್ನಾಳ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲವೂ ಇದೆ.

ಬಿಜೆಪಿ–ಜೆಡಿಎಸ್‌ ನಡುವೆ ಪೈಪೋಟಿ: ಬಿಜೆಪಿ ಹಾಗೂ ಜೆಡಿಎಸ್‌ ಈ ಕ್ಷೇತ್ರವನ್ನು ತಮ್ಮ ಪಾಲಿಗೆ ಪಡೆಯಲು ಪ್ರಯತ್ನಿಸುತ್ತಿವೆ. ಬಿಜೆಪಿಯಿಂದ ಅಜಯಕುಮಾರ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಅವರ ಸಹೋದರ ಮಹಾಂತೇಶ ಪಾಟೀಲ್ ಅವರೂ ಸ್ಪರ್ಧಿಸುವ ಸಾಧ್ಯತೆ ಕುರಿತು ಚರ್ಚೆಯಾಗುತ್ತಿದೆ. ಇದರ ಜತೆಗೆ ವೀರೇಶ ಸಜ್ಜನ ಅವರ ಹೆಸರೂ ಪ್ರಸ್ತಾಪದಲ್ಲಿದೆ.

ಜೆಡಿಎಸ್‌ನಿಂದ ಈಶಪ್ಪ ಮಾದಿನೂರು ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈಗ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಇರುವುದರಿಂದ ಕ್ಷೇತ್ರ ಹಂಚಿಕೆಯೇ ಎರಡೂ ಪಕ್ಷಗಳ ಮುಂದಿರುವ ಪ್ರಮುಖ ಸವಾಲಾಗಿದೆ. ಹಿರೇಸಿಂದೋಗಿ ಕ್ಷೇತ್ರವನ್ನು ಯಾವ ಪಕ್ಷಕ್ಕೆ ಬಿಟ್ಟುಕೊಡಬೇಕು, ಮೈತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಮೇಲೆ ಮುಂದಿನ ರಾಜಕೀಯ ಲೆಕ್ಕಾಚಾರ ನಿರ್ಧಾರವಾಗಲಿದೆ. ಒಂದು ವೇಳೆ ಮೈತ್ರಿ ಆಗದಿದ್ದರೆ ಎರಡೂ ಪಕ್ಷಗಳು ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಮೀಸಲಾತಿ ಬದಲಾವಣೆಯ ಚರ್ಚೆ: ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಮಧ್ಯೆ ಹಿರೇಸಿಂದೋಗಿ ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡುವ ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿದೆ. ಮೀಸಲಾತಿಯಲ್ಲಿ ಬದಲಾವಣೆಯಾದರೆ ಈಗಾಗಲೇ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಆಕಾಂಕ್ಷಿಗಳ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ.

ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ: ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರಚಾರದ ಜತೆಗೆ ಬೆಂಬಲಿಗರ ಸಭೆಗಳನ್ನು ನಡೆಸಿ ರಾಜಕೀಯ ಬಲ ಪ್ರದರ್ಶಿಸುತ್ತಿದ್ದಾರೆ. ಮೀಸಲಾತಿ ಅಂತಿಮಗೊಳ್ಳುವುದು, ಪಕ್ಷಗಳ ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಿರೇಸಿಂದೋಗಿ ಕ್ಷೇತ್ರದ ರಾಜಕೀಯ ಚಿತ್ರಣ ಸ್ಪಷ್ಟವಾಗಲಿದೆ.