ಸಾರಾಂಶ
ಇಂದಿನ ಯುವ ಜನತೆಯ ಅನಾಸಕ್ತಿಯಿಂದ ಬಯಲಾಟ ನಶಿಸುತ್ತಿದೆ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಇಂದಿನ ಯುವ ಜನತೆಯ ಅನಾಸಕ್ತಿಯಿಂದ ಬಯಲಾಟ ನಶಿಸುತ್ತಿದೆ ಎಂದು ಶಿಗ್ಗಾಂವಿಯ ಬಯಲಾಟ ಹಿರಿಯ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ್ ಕೊಂಡಾಯಿ ತಿಳಿಸಿದರು.ಪಟ್ಟಣದ ಕೆಳಗಿನ ಉಪ್ಪಾರಗೇರಿಯ ದೇವೀರಮ್ಮ ಆಪ್ತ ರಂಗ ಚಾವಡಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಸ್ಥಳೀಯ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯಲ್ಲಿ ಇಚ್ಚಾಶಕ್ತಿಯ ಕೊರತೆ ಬಯಲಾಟ ಹಿಂದುಳಿಯಲು ಪ್ರಮುಖ ಕಾರಣವಾಗಿದೆ ಎಂದ ಅವರು, ಹಲವು ವರ್ಷಗಳ ಹಿಂದೆ ಜನರು ನೆಲದ ಹಾಸಿನಲ್ಲಿ ಕೂತು ಆಸಕ್ತಿಯಿಂದ ಪೌರಾಣಿಕ ಕಥಾ ಬಯಲು ನಾಟಕಗಳನ್ನು ವೀಕ್ಷಿಸುತ್ತಿದ್ದರು ಎಂದು ನುಡಿದರು.ಇಂದಿನ ಯುವ ಪೀಳಿಗೆಗೆ ಬಯಲಾಟಗಳ ಕುರಿತು ಅರಿವು ಮೂಡಿಸದಿದ್ದರೆ ಭವಿಷ್ಯದಲ್ಲಿ ಜಾನಪದ ಕಲಾ ನಾಟಕಗಳ ಮೌಲ್ಯ ಸಂಪೂರ್ಣ ಹದಗೆಡುತ್ತದೆ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿ ಸದಸ್ಯ ಚಂದ್ರು ಕಾಳೇನಹಳ್ಳಿ ಮಾತನಾಡಿ, ಜನರ ಮನಸ್ಸಿನಲ್ಲಿ ದೊಡ್ಡದಾಗಿ ಬೇರೂರಿದ್ದ ಬಯಲಾಟ ನಾಟಕವು ಕಣ್ಮರೆಯಾಗಲು ಬಿಡಬಾರದು. ಬಯಲಾಟ ಪ್ರದರ್ಶನಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಲಾಟಿ ದಾದಾಪೀರ್, ಎಲ್. ಮಂಜ್ಯಾನಾಯ್ಕ, ನಿವೃತ್ತ ಡಿವೈಎಸ್ಪಿ ಪಾಲಾಕ್ಷಯ್ಯ ಹೊಸಪೇಟೆ, ಭೀಮಪ್ಪ, ನರೇಂದ್ರ, ಗುರುನಾಥ ಬಯಲಾಟ ತಜ್ಞ ರೇವಣ್ಣ, ಡಾ. ಮಲ್ಲಯ್ಯ, ಸತ್ಯನಾರಾಯಣ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಬಿ. ಪರಶುರಾಮ, ಡಿ.ಪಿ. ಸಂದೇಶ ಸೇರಿದಂತೆ ಇತರರಿದ್ದರು.