ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿಯ ಗೌರವಕ್ಕೆ ಕಂಪ್ಲಿ ಪಟ್ಟಣದ ಹಿರಿಯ ಬಯಲಾಟ ಕಲಾವಿದ ಕೆ. ವಾಲ್ಮೀಕಿ ಈರಣ್ಣ ಭಾಜನರಾಗಿದ್ದಾರೆ.

ಕಂಪ್ಲಿ: ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿಯ ಗೌರವಕ್ಕೆ ಪಟ್ಟಣದ ಹಿರಿಯ ಬಯಲಾಟ ಕಲಾವಿದ ಕೆ. ವಾಲ್ಮೀಕಿ ಈರಣ್ಣ ಭಾಜನರಾಗಿದ್ದಾರೆ.

ವಾಲ್ಮೀಕಿ ಸಮುದಾಯದ ಈರಣ್ಣ (73) ಅವರ ಬದುಕು, ಪದವಿಗಳಿಗಿಂತಲೂ ಪ್ರತಿಭೆ, ಪರಿಶ್ರಮದಿಂದ ರೂಪಿತವಾಗಿದೆ. ಕೇವಲ 2ನೇ ತರಗತಿ ವರೆಗೆ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಬಯಲಾಟದ ವೇದಿಕೆಯೇ ಅವರಿಗೆ ಗುರು, ಪಾಠಶಾಲೆ ಮತ್ತು ಜೀವನ ಮಾರ್ಗದರ್ಶಿಯಾಯಿತು. ಕಳೆದ ಐದೂವರೆ ದಶಕಗಳಿಂದ ಅವರು ಬಯಲಾಟ ಕಲಾವಿದರಾಗಿ, ಮುಖ್ಯವಾಗಿ ಮುಮ್ಮೇಳದ ಹಾಡುಗಾರನಾಗಿ ಕಲೆಗೆ ಶ್ರದ್ಧಾಭಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕಲಾ ಪಯಣ ಆರಂಭ: ರಾಮಸಾಗರದ ಖ್ಯಾತ ಬಯಲಾಟ ಮಾಸ್ಟರ್ ಜೀರು ಶಿವಲಿಂಗಪ್ಪ ಅವರ ಶಿಷ್ಯನಾಗಿ ಕಲೆಯ ಸೂಕ್ಷ್ಮತೆಗಳನ್ನು ಅಳವಡಿಸಿಕೊಂಡ ಈರಣ್ಣ, ನಂ.10 ಮುದ್ದಾಪುರದ ಜಡೆ ದೊಡ್ಡಬಸಪ್ಪ ಪ್ರೇರಣೆಯಿಂದ ಮುಮ್ಮೇಳದ ಹಾಡುಗಾರರಾಗಿ ಬಯಲಾಟ ಲೋಕಕ್ಕೆ ಅಧಿಕೃತ ಪ್ರವೇಶ ಪಡೆದರು. ಆ ಬಳಿಕ ಹಿಂದಿರುಗಿ ನೋಡದ ಕಲಾ ಪಯಣ ಆರಂಭವಾಯಿತು.

ವಿವಿಧ ಪಾತ್ರಗಳ ಅಭಿನಯ: ಗಿರಿಜಾ ಕಲ್ಯಾಣದಲ್ಲಿ ಮನ್ಮಥನ ಪಾತ್ರ, ಪಾಂಡು ವಿಜಯದಲ್ಲಿ ದ್ರೌಪದಿ (ಮಹಿಳಾ ಪಾತ್ರ), ಕಾಲಕೇಯ, ಅಭಿಮನ್ಯು ಕಾಳಗದಲ್ಲಿ ದ್ರೋಣಾಚಾರ್ಯರ ಪಾತ್ರ ಸೇರಿದಂತೆ 30ಕ್ಕೂ ಹೆಚ್ಚು ಬಯಲಾಟ ಪ್ರಸಂಗಗಳಲ್ಲಿ ಅಭಿನಯಿಸಿದ ಅವರು, 250ಕ್ಕಿಂತ ಹೆಚ್ಚಿನ ಪ್ರದರ್ಶನಗಳಲ್ಲಿ ತಮ್ಮ ಗಂಭೀರ ಅಭಿನಯ, ಶುದ್ಧ ಉಚ್ಚಾರಣೆ ಮತ್ತು ಭಾವಪೂರ್ಣ ಗಾಯನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

ಹಂಪಿ ಉತ್ಸವ, ಮೈಸೂರು ದಸರಾ ಉತ್ಸವದಂತಹ ಪ್ರತಿಷ್ಠಿತ ವೇದಿಕೆಗಳಿಂದ ಹಿಡಿದು, ಜಾತ್ರೆ, ಹಬ್ಬ, ಹರಿದಿನಗಳವರೆಗೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಷ್ಟೇ ಅಲ್ಲದೆ, ಹೈದರಾಬಾದ್, ಮುಂಬೈ, ಗುಜರಾತ್, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿಯೂ ಬಯಲಾಟ ಪ್ರದರ್ಶನ ನೀಡಿ ಕನ್ನಡದ ಜನಪದ ಸಂಸ್ಕೃತಿಯನ್ನು ಪಸರಿಸಿದ್ದಾರೆ.

ವಿವಿಧ ಪ್ರಶಸ್ತಿಗಳು: ಈರಣ್ಣ ಅವರ ಅನನ್ಯ ಕಲಾಸೇವೆ ಗುರುತಿಸಿ ಹೊಸಪೇಟೆಯ ಸಂಗೀತ ಭಾರತಿ, ಸಮಾಜ ಸೇವಾ ಭಾರ್ಗವ ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ಗೌರವಿಸಿವೆ. ಇದೀಗ ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಅವರ ಕಲಾ ಬದುಕಿನ ಶಿಖರದಂತಾಗಿದೆ. ಮಣ್ಣಿನಿಂದ ಹುಟ್ಟಿದ ಕಲೆ, ಮಣ್ಣಿನಲ್ಲೇ ಉಳಿಯಬೇಕು ಎಂಬ ಧ್ಯೇಯದೊಂದಿಗೆ ಬದುಕು ಸವೆಸಿದ ಈರಣ್ಣ ಅವರ ಸಾಧನೆ, ಇಂದಿನ ಯುವ ಕಲಾವಿದರಿಗೆ ದಾರಿದೀಪವಾಗಿದೆ.

ಸಂತಸ ವ್ಯಕ್ತಪಡಿಸಿದ ವಾಲ್ಮೀಕಿ ಈರಣ್ಣ: ಪ್ರಶಸ್ತಿ ದೊರೆತ ಕುರಿತು ಸಂತಸ ವ್ಯಕ್ತಪಡಿಸಿದ ವಾಲ್ಮೀಕಿ ಈರಣ್ಣ, ಬಯಲಾಟ ಕಲೆಯನ್ನು ಉಳಿಸಲು ಕಷ್ಟಪಟ್ಟು ನಡೆಸಿದ ಈ ದೀರ್ಘ ಪಯಣಕ್ಕೆ ಸಿಕ್ಕ ಗೌರವ ಇದು. ಕಲೆಯಿಂದ ಹಣ ಸಂಪಾದನೆ ಆಗದಿದ್ದರೂ ಜನರ ಪ್ರೀತಿ ಮತ್ತು ಅನುಭವವೇ ನನ್ನ ಸಂಪತ್ತು. ಬಯಲಾಟ ನಮ್ಮ ಗಂಡುಮೆಟ್ಟಿನ ನಾಡಿನ ಶುದ್ಧ ಕನ್ನಡ ಸಂಪ್ರದಾಯ. ಯುವಜನತೆ ಈ ಕಲೆಯಲ್ಲಿ ತೊಡಗಿ, ಆಡಿ- ಆಡಿಸಿ ಬಯಲಾಟವನ್ನು ಜೀವಂತವಾಗಿ ಉಳಿಸಬೇಕು ಎಂದು ಮನದಾಳದ ಆಶಯ ವ್ಯಕ್ತಪಡಿಸಿದರು.