ವಿರೂಪಾಪುರ ರಂಗನಟಿ ಗಂಗಮ್ಮಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

| Published : Dec 04 2024, 12:33 AM IST

ಸಾರಾಂಶ

ವಿರೂಪಾಪುರ ಗಂಗಮ್ಮ ಅವರಿಗೆ 2024- 25ನೇ ಸಾಲಿನ ಬಯಲಾಟ ಅಕಾಡೆಮಿ ಗೌರವ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ವಿರೂಪಾಪುರ ಗಂಗಮ್ಮ ಎಂದರೆ ನಾಟಕ ರಂಗದಲ್ಲಿ ಯಾರಿಗೆ ಪರಿಚಯವಿಲ್ಲ ಹೇಳಿ? ಕರ್ನಾಟಕ ಬಯಲಾಟ ಅಕಾಡೆಮಿ 2024- 25ನೇ ಸಾಲಿನ ಗೌರವ ವಾರ್ಷಿಕ ಪ್ರಶಸ್ತಿ ಇದೀಗ ವಿರೂಪಾಪುರ ರಂಗನಟಿ ಗಂಗಮ್ಮನನ್ನು ಅರಸಿ ಬಂದಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾಳೆ.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಂತೂ ಯಾವುದೇ ಬಯಲಾಟ ನಡೆದರೂ ಗಂಗಮ್ಮ ಯಾವ ಪಾತ್ರಗಳನ್ನೂ ಬಿಡದೆ ಅಭಿನಯಿಸಿದ ಕೀರ್ತಿ ಸಲ್ಲುತ್ತದೆ. 8ನೇ ತರಗತಿ ಓದುತ್ತಿದ್ದಾಗ ನಾಟಕವೊಂದರಲ್ಲಿ ಡ್ಯಾನ್ಸ್ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡ ಇವರು.

ಗಂಗಮ್ಮ ಕಂದಗಲ್ಲು ಗ್ರಾಮದಲ್ಲಿ ನಡೆದ ದಸರಾ ಎಂಬ ನಾಟಕದಲ್ಲಿ ಚಂಚಲಾ ಪಾತ್ರ ಮೂಡುವ ಮೂಲಕ ಗಮನಸೆಳೆದಿದ್ದಲ್ಲದೇ ಕಂದಗಲ್ಲು ಗ್ರಾಮದಲ್ಲಿ ಒಂದು ತಿಂಗಳು ಇದ್ದು ಕಕ್ಕುಪ್ಪಿಯ ಮಹದೇವಪ್ಪ ಮಾಸ್ಟರ್ ಅವರಿಂದ ನಾಟಕದ ಅಭಿನಯ ಕಲಿಯುವ ಮೂಲಕ ರಂಗನಟಿಯಾದಳು.

ಗಂಗಮ್ಮನ ಊರು ಮೂಲತಃ ಚೌಡಾಪುರ. ಚಿಕ್ಕವಯಸ್ಸಿನಲ್ಲಿಯೇ ಚೌಡಾಪುರದಿಂದ ವಿರೂಪಾಪುರಕ್ಕೆ ಬಂದ ಗಂಗಮ್ಮಳ ಕುಟುಂಬ ವಿರೂಪಾಪುರದಲ್ಲಿ ವಾಸವಾಗುವ ಮೂಲಕ ವಿರೂಪಾಪುರದವರೇ ಆಗಿದ್ದಾರೆ. ಗಂಗಮ್ಮಗೆ ಇಬ್ಬರು ಗಂಡುಮಕ್ಕಳು, ಒಬ್ಬ ಹೆಣ್ಣುಮಗಳಿದ್ದು ಇವರ ತಾಯಿ ಭರಮಮ್ಮ, ತಂದೆ ಕಾಡಪ್ಪ. ಅವರು ಪ್ರೋತ್ಸಾಹ ನೀಡಿದ್ದರಿಂದ ನಾಟಕ ರಂಗಕ್ಕೆ ಕಾಲಿಡಲು ಸಾಧ್ಯವಾಯಿತು. ದಸರಾ ನಾಟಕದಲ್ಲಿ ಚಂಚಲಾ ಪಾತ್ರ ಮೂಲಕ ಜನಮನ ಗೆದ್ದ ಗಂಗಮ್ಮ ನಂತರ ಚಿನ್ನದ ಗೊಂಬೆ, ಕಲಿತ ಕಳ್ಳ, ಅಣ್ಣತಂಗಿ, ಕಣ್ಣೀರು, ದೀಪಾ, ರಕ್ತಮುಕುಟ ಹೀಗೆ ಸಾಲು-ಸಾಲು ಸಾಮಾಜಿಕ ನಾಟಕಗಳಲ್ಲಿ ನಿರಂತರ ಅಭಿನಯಿಸುವ ಮೂಲಕ ಇಡೀ ಉತ್ತರ ಕರ್ನಾಟಕದ ಮೂಲೆ ಮೂಲೆಗೂ ತನ್ನ ಅಭಿನಯದ ಮೂಲಕ ಪರಿಚಯವಾದಳು. ಹಂತ-ಹಂತವಾಗಿ ರಂಗಕಲೆಯಲ್ಲಿ ಪಳಗಿದ ನಟಿಯಾಗಿ ಹೊರಹೊಮ್ಮಿದ ಗಂಗಮ್ಮ ಪೌರಾಣಿಕ ನಾಟಕಗಳಲ್ಲೂ ಕಡಿಮೆ ಇಲ್ಲ ಎನ್ನುವಂತೆ ಅಭಿನಯಿಸಿದ ಕೀರ್ತಿ ಈ ಕಲಾವಿದೆಗೆ ಸಲ್ಲುತ್ತದೆ. ರಕ್ತರಾತ್ರಿ, ಕುರುಕ್ಷೇತ್ರ, ನಾಟಕಗಳಲ್ಲಿ ಮುಖ್ಯಪಾತ್ರಗಳಲ್ಲಿಯೇ ಕಾಣಿಸಿಕೊಂಡ ಗಂಗಮ್ಮ ಬಯಲಾಟಗಳಲ್ಲಂತೂ ಕರತಲಾಮಲಕ.

ಎಸ್ಸೆಸ್ಸೆಲ್ಸಿ ಓದಿರುವ ಗಂಗಮ್ಮ ಇಲ್ಲಿ ವರೆಗೂ ಸಾವಿರಕ್ಕೂ ಹೆಚ್ಚು ಬಯಲಾಟ, ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೂಡ್ಲಿಗಿ ತಾಲೂಕು ಅಲ್ಲದೇ ಸಿಂಧನೂರು, ಸಿರುಗುಪ್ಪ, ಗಂಗಾವತಿ, ತಾವರಗೆರೆ ಸೇರಿದಂತೆ ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ಬಯಲಾಟದಲ್ಲಿ ಅಭಿನಯಿಸಿದ ಕೀರ್ತಿ ಈ ಕಲಾವಿದೆಗೆ ಸಲ್ಲುತ್ತದೆ. ತಮ್ಮೂರಿನ ಹಿರಿಯ ರಂಗನಟಿ ಎಸ್. ಅಂಜಿನಮ್ಮನ ಜೊತೆಗೂಡಿ ಮಹಿಳಾ ಡೊಳ್ಳುಕುಣಿತಕ್ಕೂ ಮುಂದಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ಗಂಗಮ್ಮ ನಾಟಕರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಎಂಬತ್ತರ ದಶಕದಲ್ಲಿ ಹೊಸದಾಗಿ ರಂಗನಟಿಯಾಗಿದ್ದಾಗ ಹಳ್ಳಿಗಳಿಗೆ ಹೋಗಿ ಪಾತ್ರ ಮಾಡಲು ಇವರು ಪಡುತ್ತಿದ್ದ ಪಾಡಿಪಾಟಿಲುಗಳು ನೂರಾರು. ಬಸ್ಸುಗಳು ಇಲ್ಲದ ಹಳ್ಳಿಗಳಿಗೆ ಚಕ್ಕಡಿಗಳಲ್ಲಿ ಹೋಗುವಾಗ ಎದುರಿಸುತ್ತಿದ್ದ ಸಮಸ್ಯೆಗಳು, ಪ್ರಸಂಗಗಳ ಬಗ್ಗೆ ಗಂಗಮ್ಮನ ಮಾತಲ್ಲಿ ಕೇಳಿದರೆ ದಿನಗಟ್ಟಲೇ ಆದರೆ ಸಾಲುವುದಿಲ್ಲ, ಗಂಗಮ್ಮ ರಂಗಭೂಮಿ ಪಯಣವನ್ನು ಬಿಚ್ಚಿಡುವುದನ್ನು ನೋಡಿದರೆ ಎಂತವರಿಗೂ ಕರುಳು ಚುರ್ರ್ ಅನ್ನದೇ ಇರದು. ಇಂತಹ ಹಿರಿಯ ರಂಗನಟಿಯರ ಬದುಕಿಗೆ ಸರ್ಕಾರ ಆರ್ಥಿಕ ಭದ್ರತೆ, ಸಹಕಾರ ನೀಡುವ ಮೂಲಕ ಇವರ ನಿವೖತ್ತಿಯ ಜೀವನವನ್ನು ಸುಗಮಗೊಳಿಸಬೇಕು.ಸಾರ್ಥಕ ಕ್ಷಣ

ರತಿ ಕಲ್ಯಾಣ, ಪಾರ್ಥವಿಜಯ, ಅಭಿಮನ್ಯು ಕಾಳಗ, ಗಿರಿಜಾ ಕಲ್ಯಾಣ, ಮೂರೂವರೆ ವಜ್ರ, ಶುಂಭ, ನಿಶುಂಭರ ವಧೆ, ಹೀಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನನ್ನನ್ನು ಕೂಡ್ಲಿಗಿ ತಾಲೂಕಿನಲ್ಲಿ ಸಂಗ್ಯಾ ಬಾಳ್ಯಾ ನಾಟಕದಲ್ಲಿ ಪೋರಮ್ಮನ ಪಾತ್ರಕ್ಕೆ ಹೆಚ್ಚು ಕರೆಯುಸುತ್ತಿದ್ದರು. ಇಲ್ಲಿ ವರೆಗೂ ನನ್ನ ಕಲೆಯನ್ನು ಗುರುತಿಸಲಿಲ್ಲ. ಈಗ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ದುರ್ಗದಾಸ್ ಹಾಗೂ ಸದಸ್ಯರು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ನನ್ನ ಜೀವನದಲ್ಲಿ ಸಾರ್ಥಕ ಕ್ಷಣವಾಗಿದೆ.

- ವಿರೂಪಾಪುರ ಗಂಗಮ್ಮ.

ಹಿರಿಯ ಬಯಲಾಟ ಕಲಾವಿದೆ