ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗಾಗಿ ಒಟಿಎಸ್‌ ಅವಧಿ 2 ತಿಂಗಳು ವಿಸ್ತರಣೆಗೆ ರಾಜ್ಯ ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವ

| Published : Aug 06 2024, 01:35 AM IST / Updated: Aug 06 2024, 09:48 AM IST

ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗಾಗಿ ಒಟಿಎಸ್‌ ಅವಧಿ 2 ತಿಂಗಳು ವಿಸ್ತರಣೆಗೆ ರಾಜ್ಯ ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ಅನುಕೂಲವಾಗುವ ಒನ್‌ ಟೈಂ ಸೆಟಲ್‌ಮೆಂಟ್‌ (ಒಟಿಎಸ್‌) ಸೌಲಭ್ಯವನ್ನು ಸೆ.30ರವರೆಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ಬೆಂಗಳೂರು : ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ಅನುಕೂಲವಾಗುವ ಒನ್‌ ಟೈಂ ಸೆಟಲ್‌ಮೆಂಟ್‌ (ಒಟಿಎಸ್‌) ಸೌಲಭ್ಯವನ್ನು ಸೆ.30ರವರೆಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ತೆರಿಗೆ ಸುಸ್ತಿದಾರರು ಜು.31ರೊಳಗೆ ಒಟಿಎಸ್‌ ವ್ಯವಸ್ಥೆ ಅಡಿಯಲ್ಲಿ ಒಮ್ಮೆಲೇ ಬಾಕಿ ತೆರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡ ಮನ್ನಾ ಮಾಡುವ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಿತ್ತು. ಈ ವ್ಯವಸ್ಥೆ ಅಡಿಯಲ್ಲಿ 4.11 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳಿಂದ ₹956.09 ಕೋಟಿ ತೆರಿಗೆ ವಸೂಲಿಯಾಗಬೇಕಿತ್ತು. ಆದರೆ, ಒಟಿಎಸ್‌ ಅವಕಾಶ ನೀಡಿದ ಅವಧಿಯಲ್ಲಿ ಕೇವಲ 1.14 ಲಕ್ಷ ಆಸ್ತಿಗಳಿಂದ ₹380 ಕೋಟಿ ಬಾಕಿ ತೆರಿಗೆ ವಸೂಲಿಯಾಗಿತ್ತು. ಇನ್ನೂ 3.04 ಲಕ್ಷ ಆಸ್ತಿಗಳಿಂದ ₹831.53 ಕೋಟಿ ಬಾಕಿ ತೆರಿಗೆ ಪಾವತಿಸಬೇಕಿದೆ ಎಂದರು.

ಒಟಿಎಸ್ ಅವಧಿ ವಿಸ್ತರಿಸುವಂತೆ ವಿವಿಧ ಸಂಘಟನೆಗಳು, ತೆರಿಗೆ ಬಾಕಿದಾರರು ಬಿಬಿಎಂಪಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆ. ಹೀಗಾಗಿ ಒಟಿಎಸ್‌ ಸೌಲಭ್ಯವನ್ನು ಸೆ.30ರವರೆಗೆ ವಿಸ್ತರಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.