ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆ: ಪಾಲಿಕೆಗೆ 125ನೇ ರ್‍ಯಾಂಕ್‌

| Published : Jan 12 2024, 01:46 AM IST

ಸಾರಾಂಶ

ಸ್ವಚ್ಛ ಸರ್ವೇಕ್ಷಣಾ ರ್ಯಾಂಕ್‌ನಲ್ಲಿ ಬಿಬಿಎಂಪಿಗೆ 126ನೇ ಸ್ಥಾನ ಲಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದ ಈ ಬಾರಿಯ ಸ್ವಚ್ಛ ಸರ್ವೇಕ್ಷಣದಲ್ಲಿ ಬಿಬಿಎಂಪಿ 125ನೇ ರ್‍ಯಾಂಕ್‌ಗೆ ತೃಪ್ತಿಪಟ್ಟುಕೊಂಡಿದೆ.

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದಿಂದ ನಡೆಸಲಾದ ಈ ಬಾರಿಯ ಸ್ವಚ್ಛ ಸರ್ವೇಕ್ಷಣ-2023ರ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ದೇಶದ 446 ನಗರಗಳ ಪೈಕಿ ಬಿಬಿಎಂಪಿ 125ನೇ ಸ್ಥಾನ ಪಡೆದಿದೆ. 2017ರಲ್ಲಿ 210 ನೇ ರ್‍ಯಾಂಕ್‌ , 2018ರಲ್ಲಿ 216 ನೇ ರ್‍ಯಾಂಕ್‌, 2019ರಲ್ಲಿ 194ನೇ ರ್‍ಯಾಂಕ್‌ ಹಾಗೂ 2020ರಲ್ಲಿ 214ನೇ ರ್‍ಯಾಂಕ್‌ ಸ್ಥಾನ ಪಡೆದಿದ್ದು, ಈ ಬಾರಿ 125ನೇ ರ್‍ಯಾಂಕ್‌ ಪಡೆಯುವ ಮೂಲಕ ಉತ್ತಮ ಸ್ಥಾನ ಪಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2022ನೇ ಸಾಲಿನ ಸಮೀಕ್ಷೆಯಲ್ಲಿ ನಗರಗಳನ್ನು 10 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಆಗ 45 ನಗರಗಳ ಪೈಕಿ ಬಿಬಿಎಂಪಿ 43ನೇ ರ್‍ಯಾಂಕ್‌ ಪಡೆದಿತ್ತು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದಾಗ ಬಿಬಿಎಂಪಿಯೂ ಮೂರನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಮೈಸೂರು, ಎರಡನೇ ಸ್ಥಾನದಲ್ಲಿ ಹುಬ್ಬಳ್ಳಿ - ಧಾರವಾಡ ಪಾಲಿಕೆಗಳಿವೆ.ಬಾಕ್ಸ್‌...

ನೈರ್ಮಲ್ಯ ಸಮೀಕ್ಷೆಯಲ್ಲಿ

ವಾಟರ್‌ ಪ್ಲಸ್‌ ರ್ಯಾಂಕ್‌

ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ನೈರ್ಮಲ್ಯ ಸಮೀಕ್ಷೆಯಲ್ಲಿ ‘ವಾಟರ್ ಪ್ಲಸ್‌’ ಉನ್ನತ ರ್‍ಯಾಂಕ್‌ ನೀಡಿದೆ. ಸರ್ವೀಸ್‌ ಲೆವಲ್‌ ಪ್ರೋಗ್ರಾಂ ಮತ್ತು ಸಿಟಿಜನ್ಸ್ ವಾಯ್ಸ್‌ನಲ್ಲಿ ಬಿಬಿಎಂಪಿ ಉತ್ತಮವಾಗಿ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಸಮೀಕ್ಷೆಯಲ್ಲಿ ಭಾಗವಹಿಸಿರುವುದು ಸಹ ಉತ್ತಮ ಆಡಳಿತಕ್ಕೆ ಸ್ಫೂರ್ತಿಯಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.