ತೆರಿಗೆ ವ್ಯಾಪ್ತಿಯಲ್ಲಿಲ್ಲದ ಆಸ್ತಿಗಳ ಪತ್ತೆ ಸಮೀಕ್ಷೆಗೆ ಜಿಪಿಎಸ್‌

| Published : Aug 27 2024, 01:39 AM IST

ಸಾರಾಂಶ

ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿ ತಪ್ಪು ಮಾಹಿತಿ ನೀಡಿರುವ ಆಸ್ತಿಗಳ ಪತ್ತೆಗೆ ಜಿಪಿಎಸ್ ತಂತ್ರಾಂಶ ಬಳಸಿ ಆಸ್ತಿಗಳ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿ ತಪ್ಪು ಮಾಹಿತಿ ನೀಡಿರುವ ಆಸ್ತಿಗಳ ಪತ್ತೆಗೆ ಜಿಪಿಎಸ್ ತಂತ್ರಾಂಶ ಬಳಸಿ ಆಸ್ತಿಗಳ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿದ್ದು, ಈ ಪೈಕಿ ಸದ್ಯ 16 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳು ಮಾತ್ರ ತೆರಿಗೆ ಪಾವತಿಸುತ್ತಿವೆ. ಉಳಿದ ಆಸ್ತಿಗಳು ಇನ್ನೂ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಹೀಗಾಗಿ ತೆರಿಗೆ ವ್ಯಾಪ್ತಿಗೆ ಬರದ ಆಸ್ತಿಗಳ ಪತ್ತೆ ಹಾಗೂ ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡುವ ಆಸ್ತಿಗಳ ಪತ್ತೆಗಾಗಿ ಜಿಪಿಎಸ್‌ ತಂತ್ರಾಂಶ ಬಳಸಿ ಪ್ರತಿ ಆಸ್ತಿಗೂ ಭೇಟಿ ನೀಡಿ ವಿವರ ಸಂಗ್ರಹಿಸಲು 200 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತಿದೆ.

ಬಿಬಿಎಂಪಿ ಯೋಜನೆಯಂತೆ ಆಸ್ತಿಗಳಲ್ಲಿನ ಕಟ್ಟಡಗಳ ವಿವರ, ಅವುಗಳ ವಿಸ್ತೀರ್ಣ ಸೇರಿ ಇನ್ನಿತರ ಮಾಹಿತಿಗಳನ್ನು ಜಿಪಿಎಸ್‌ ಲೊಕೇಷನ್‌ನಲ್ಲಿ ಲಾಕ್‌ ಮಾಡಿ ಹೊಸದಾಗಿ ಸಿದ್ಧಪಡಿಸಿದ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ನಮೂದಿಸಲಾಗುತ್ತದೆ. ಹೀಗೆ ಆಸ್ತಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಮಾಲೀಕರಿಂದ ಆಸ್ತಿ ತೆರಿಗೆ ಪಾವತಿ ರಸೀದಿ ಮತ್ತು ವಿದ್ಯುತ್‌ ಬಿಲ್‌ ಪಡೆಯಲಾಗುತ್ತದೆ. ನಂತರ ಆಸ್ತಿಯ ಫೋಟೋ ಮತ್ತು ಆಸ್ತಿ ಸಂಖ್ಯೆಯನ್ನು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ.