ಬಿಬಿಎಂಪಿ ಪ್ರೌಢಶಾಲೆಗಳಲ್ಲಿ ಶೇ. 68.78ರಷ್ಟು ಫಲಿತಾಂಶ

| Published : May 10 2024, 01:32 AM IST

ಸಾರಾಂಶ

ಎಎಸ್ಸೆಲ್ಸಿ ಪರೀಕ್ಷೆಯಲ್ಲಿ ಬಿಬಿಎಂಪಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಮತ್ತಿಕೆರೆ ಬಾಲಕಿಯರ ಶಾಲೆಗೆ ಶೇ.92.78 ಫಲಿತಾಂಶ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ನಿರ್ವಹಣೆಯ 33 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 2,502 ವಿದ್ಯಾರ್ಥಿಗಳ ಪೈಕಿ 1,721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡ 68.78ರಷ್ಟು ಫಲಿತಾಂಶ ಪಡೆದುಕೊಂಡಿವೆ.

ಕಳೆದ 2022-23ನೇ ಸಾಲಿನಲ್ಲಿ ಬಿಬಿಎಂಪಿ ಪ್ರೌಢಶಾಲೆಗಳು ಶೇ. 67.53ರಷ್ಟು ಫಲಿತಾಂಶ ಪಡೆದುಕೊಂಡಿದ್ದವು. ಈ ವರ್ಷ ಶೇ. 1.25ರಷ್ಟು ಹೆಚ್ಚಿನ ಫಲಿತಾಂಶ ಬಂದಿದೆ.

ಮತ್ತಿಕೆರೆಯ ಬಾಲಕಿಯರ ಪ್ರೌಢಶಾಲೆಯು ಶೇ. 92.78ರಷ್ಟು ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದಂತೆ ಭೈರವೇಶ್ವರನಗರ ಪ್ರೌಢಶಾಲೆಯು ಶೇ.91.98, ಹೇರೋಹಳ್ಳಿ ಪ್ರೌಢಶಾಲೆಯು ಶೇ.90.56ರಷ್ಟು ಫಲಿತಾಂಶ ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. 2023-24ನೇ ಸಾಲಿನಲ್ಲಿ ಒಟ್ಟು 66 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನ 625ಕ್ಕೆ 619 ಅಂಕಗಳಿಸಿ, ಬಿಬಿಎಂಪಿ ಪ್ರೌಢಶಾಲೆಯಲ್ಲಿಯೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಲಗ್ಗೆರೆ ಪ್ರೌಢಶಾಲೆಯ ಟಿ.ಜೆ.ಯಶವಂತ್‌ 610 ಅಂಕ ಪಡೆದಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

610 ಅಂಕ ಪಡೆದ ದಿನಗೂಲಿ ನೌಕರನ ಮಗಕನ್ನಡಪ್ರಭ ವಾರ್ತೆ ಬೆಂಗಳೂರು

ತಂದೆ ಜಗದೀಶ್‌ ಕೈಗಾರಿಕೆಯೊಂದರಲ್ಲಿ ದಿನಗೂಲಿ ನೌಕರ, ತಾಯಿ ಪ್ರೇಮಾ ಗಾರ್ಮೆಂಟ್ಸ್‌ ಉದ್ಯೋಗಿ. ಈ ದಂಪತಿಯ ಪುತ್ರ ಟಿ.ಜೆ.ಯಶವಂತ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 610 ಅಂಕಗಳನ್ನು (ಶೇ.97.6) ಪಡೆದು ಸಾಧನೆ ಮಾಡಿದ್ದಾರೆ.

ನಮ್ಮದು ಬಡತನದ ಕುಟುಂಬ. ತಂದೆ, ತಾಯಿಯ ದುಡಿಮೆಯೇ ಆಧಾರ. ಅವರು ಬೆವರು ಸುರಿಸಿ ನನ್ನನ್ನು ಓದಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುವುದು ನನ್ನ ಕರ್ತವ್ಯ. ಮುಂದೆ ಇನ್ನಷ್ಟು ಉತ್ತಮವಾಗಿ ಓದಿ ಖಗೋಳಶಾಸ್ತ್ರ ವಿಜ್ಞಾನಿಯಾಗುವ ಕನಸು ಹೊಂದಿದ್ದೇನೆ ಎನ್ನುತ್ತಾರೆ ಲಗ್ಗೆರೆಯ ಬಿಬಿಎಂಪಿ ಪ್ರೌಢಶಾಲೆಯ ವಿದ್ಯಾರ್ಥಿ ಯಶವಂತ್‌.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ ಇಲ್ಲವೆಂದು ಭಾವಿಸುವುದು ತಪ್ಪು. ನಮ್ಮ ಶಾಲೆಯಲ್ಲಿನ ಶಿಕ್ಷಕರು ತುಂಬಾ ಆಸಕ್ತಿದಾಯಕವಾಗಿ ಬೋಧನೆ ಮಾಡುವುದರಿಂದಲೇ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಗಣಿತಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರ ಬದುಕು, ಜೀವನ, ಸಾಧನೆ ನನಗೆ ಪ್ರೇರಣೆ. ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಟಾಪರ್ಸ್‌ ಕೋಟ್‌ಗಳುಆರಂಭದಿಂದಲೂ ಪ್ರತಿದಿನ ತರಗತಿಯಲ್ಲಿ ಬೋಧನೆಯನ್ನು ಅಂದೇ ಪುನರ್‌ಮನನ ಮಾಡಿಕೊಳ್ಳುತ್ತಾ ಹೋಗಿದ್ದು ಪರೀಕ್ಷೆಯಲ್ಲಿ ರ್‍ಯಾಂಕ್‌ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಜೊತೆಗೆ ಟ್ಯೂಷನ್‌ಗೆ ಹೋಗಿದ್ದು ಕೂಡ ಅನುಕೂಲವಾಯಿತು. ಸಂಸ್ಕೃತದಲ್ಲಿ ಒಂದು ಅಂಕ ಕಡಿಮೆಯಾಗಿದ್ದು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ. ಸದ್ಯ ನೀಟ್ ಕೋಚಿಂಗ್ ಸೇರಿದ್ದೇನೆ. ಭವಿಷ್ಯದಲ್ಲಿ ವೈದ್ಯೆಯಾಗಬೇಕೆಂಬ ಕನಸಿದೆ. - ಮೇಧಾ ಪಿ ಶೆಟ್ಟಿ, ದ್ವಿತೀಯ ಟಾಪರ್‌, ಹೋಲಿ ಚೈಲ್ಡ್ ಇಂಗ್ಲೀಷ್ ಹೈ ಸ್ಕೂಲ್, ಬೆಂಗಳೂರುರ್‍ಯಾಂಕ್‌ ನಿರೀಕ್ಷೆ ಇರಲಿಲ್ಲ. 620 ಅಂಕಗಳು ಬರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, 623 ಅಂಕದೊಂದಿಗೆ ಮೂರನೇ ಟಾಪರ್‌ ಸ್ಥಾನ ಹಂಚಿಕೊಂಡಿರುವುದು ಖುಷಿಯಾಗಿದೆ. ಶಾಲೆ, ಟ್ಯೂಷನ್‌ ಬಳಿಕ ಭರತನಾಟ್ಯ, ಹಿಂದೂಸ್ಥಾನಿ ಸಂಗೀತವನ್ನು ಕೂಡ ಅಭ್ಯಾಸ ಮಾಡುತ್ತಿದ್ದೇನೆ. ಪಿಯುಸಿಯಲ್ಲಿ ಪಿಸಿಎಂಸಿ ಪಡೆದು ನಂತರ ಸಾಫ್ಟ್‌ವೇರ್ ಎಂಜಿನಿಯರ್ ಆಗಬೇಕೆಂಬ ಗುರಿ ಇದೆ. - ಮಾನ್ಯತಾ ಮಯ್ಯ, ತೃತೀಯ ಟಾಪರ್‌, ಎನ್‌ಇಟಿ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು

ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಖುಷಿಯಿದೆ. ಶಿಕ್ಷಕರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ. ನಿತ್ಯ ಕೆಲ ಗಂಟೆಗಳ ಕಾಲ ಓದಿನ ಜೊತೆಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲು ಭಾಗಿಯಾಗುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಅನೇಕ ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ಮೂಲಕ ಸಿದ್ಧತೆ ನಡೆಸಿದ್ದೆ. ಮುಂದೆ ಪಿಸಿಎಂಸಿ ಓದಬೇಕು ಎಂದು ತೀರ್ಮಾನಿಸಿದ್ದೇನೆ. - ಸೌರವ್ ಕೌಶಿಕ್, 3ನೇ ಟಾಪರ್‌, ವಿವಿಎಸ್ ಸರ್ದಾರ್ ಪಟೇಲ್ ಹೈಸ್ಕೂಲ್, ರಾಜಾಜಿನಗರ