ಅಸ್ತಿತ್ವದಲ್ಲಿ ಇಲ್ಲದ ಸೊಸೈಟಿಗಳಿಗೆ ಪಾಲಿಕೆ ಹಣ?

| Published : Jun 29 2024, 01:15 AM IST / Updated: Jun 29 2024, 05:49 AM IST

ಸಾರಾಂಶ

ಬಿಬಿಎಂಪಿಯಲ್ಲಿ ಭಾರಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಸ್ತಿತ್ವದಲ್ಲೇ ಇರದ ಸಹಕಾರಿ ಸಂಘಗಳಿಗೆ ಅಕ್ರಮವಾಗಿ ಕೋಟ್ಯಂತರ ರುಪಾಯಿ ಹಣ ವರ್ಗ ಮಾಡಿರುವ ಆರೋಪ ಕೇಳಿಬಂದಿದೆ.

 ಬೆಂಗಳೂರು : ನಗರದಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವ ಸಹಕಾರಿ ಸಂಘ ಹಾಗೂ ಕೋ ಆಪರೇಟಿವ್‌ ಸೊಸೈಟಿಗಳಿಗೆ ಅಕ್ರಮವಾಗಿ ಬಿಬಿಎಂಪಿಯಿಂದ ಕೋಟ್ಯಂತರ ರುಪಾಯಿ ವರ್ಗಾವಣೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಬಿಬಿಎಂಪಿಯ ಆಡಳಿಯ ವಿಭಾಗದ ಉಪ ಆಯುಕ್ತರು, ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಸೊಸೈಟಿ ಹಾಗೂ ಸಹಕಾರಿ ಸಂಘಗಳಿಗೆ ಪಾಲಿಕೆಯ ಕೋಟ್ಯಂತರ ರು. ಅಕ್ರಮವಾಗಿ ವರ್ಗಾವಣೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್‌ ಮಹಾ ನಿರ್ದೇಶಕರು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಬಿಬಿಎಂಪಿ ಪಶ್ಚಿಮ ವಲಯದಲ್ಲಿ 9 ಅಧಿಕಾರಿಗಳ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡುವಂತೆ ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಡಳಿತ ವಿಭಾಗದ ಉಪ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯದೊಂದಿಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.ದೂರಿನಲ್ಲಿ ಏನಿದೆ?

ಬಿಬಿಎಂಪಿಯ ಎಂಟು ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳು, ತಮ್ಮ ಆಪ್ತ ವಲಯದ ಖಾಸಗಿ ವ್ಯಕ್ತಿಗಳನ್ನು ಏಜೆಂಟ್‌ಗಳನ್ನಾಗಿ ಬಳಸಿಕೊಂಡು ಸರ್ಕಾರ 2017-18 ಹಾಗೂ 2018-19ರ ಸಾಲಿಗೆ ಸಂಬಂಧಿಸಿದಂತೆ ಸಣ್ಣ ಉದ್ದಿಮೆದಾರರಿಗೆ ಸ್ವಯಂ ಉದ್ಯೋಗದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಅರಿವಿಗೆ ಬಾರದೇ ಅವರ ದಾಖಲೆಗಳು, ಸಹಿಗಳನ್ನು ಪಡೆದು ಫಲಾನುಭವಿಗಳ ಪಟ್ಟಿ ಸೃಷ್ಟಿಸಿದ್ದಾರೆ. ಬಳಿಕ ಅಕ್ರಮಕ್ಕೆಂದು ಸ್ಥಾಪಿಸಿಕೊಂಡ ಮತ್ತು ಅಸ್ತಿತ್ವದಲ್ಲಿಯೇ ಇಲ್ಲದ ಸಹಕಾರಿ ಸಂಸ್ಥೆ, ಕೋ- ಆಪರೇಟಿವ್‌ ಸೊಸೈಟಿಗಳಿಗೆ ಕೋಟ್ಯಂತರ ರು.ಗಳನ್ನು ಅಕ್ರಮವಾಗಿ 2019-20 ಹಾಗೂ 2020-21ರಲ್ಲಿ ವರ್ಗಾವಣೆ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ.

ಈ ಅಕ್ರಮದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಅಂಗವಿಕರು, ಮಹಿಳೆಯರು, ವಿಧವೆಯರು, ನಿರುದ್ಯೋಗಿಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಯೋಜನೆ ದುರ್ಬಳಕೆ, ಅಕ್ರಮ ಹಣ ವರ್ಗಾವಣೆ, ವಂಚನೆ, ಸುಳ್ಳು ದಾಖಲೆ ಸೃಷ್ಟಿಸಿ ಪಾಲಿಕೆಗೆ ಕೋಟ್ಯಂತರು ನಷ್ಟ ಉಂಟಾಗಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.9 ಅಧಿಕಾರಿಗಳ ವಿವರ

ಸುಬೇಶ್, ಎಸ್‌.ಎಸ್‌.ದೇವಕಿ, ಬಿ.ಗಾಯತ್ರಿ, ಜೆ.ಎಸ್‌.ಸುಬ್ಬರಾಮಯ್ಯ, ಎಸ್‌.ವಿ.ಗಿರಿಯಪ್ಪ, ಎನ್‌.ಗೀತಾ, ಕುಮಾರಿ ಕುಸುಮಾ ಹಾಗೂ ಲಿಂಗಣ್ಣ ಗುಂಡಳ್ಳಿ ಅವರು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಹಣಕಾಸು ವಿಭಾಗದ ಉಪ ನಿಯಂತ್ರಕರಾಗಿ 2019-20 ಹಾಗೂ 2020-21ರಲ್ಲಿ ಕಾರ್ಯವಹಿಸುತ್ತಿದ್ದರು. ಈ 9 ಅಧಿಕಾರಿಗಳ ವಿರುದ್ಧ ವಿಚಾರಣೆ ಮತ್ತು ತನಿಖೆಗೆ ಲೋಕಾಯುಕ್ತ ಪೂರ್ವಾನುಮತಿ ಕೋರಿದೆ.

ಸೊಸೈಟಿಗಳಿಗೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ಅವರು ವರದಿ ಸಲ್ಲಿಸಿದ ನಂತರವೇ ಯಾವ- ಯಾವ ಸೊಸೈಟಿ ಹಾಗೂ ಸಹಕಾರ ಸಂಘಗಳಿಗೆ ಎಷ್ಟು ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುದು ತಿಳಿಯಲಿದೆ.

-ಮಂಜುನಾಥ ಸ್ವಾಮಿ, ಉಪ ಆಯುಕ್ತ, ಬಿಬಿಎಂಪಿ ಆಡಳಿತ ವಿಭಾಗ.