ಸಾರಾಂಶ
ಬೆಂಗಳೂರು : ಬಿಬಿಎಂಪಿಯ ಶಾಲಾ ಕಾಲೇಜುಗಳು ಆರಂಭಗೊಂಡು ಬರೋಬ್ಬರಿ ಎರಡೂವರೆ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆ ಆಗಿಲ್ಲ.
ಬಿಬಿಎಂಪಿಯು 93 ಶಿಶುವಿಹಾರ, 16 ಪ್ರಾಥಮಿಕ ಶಾಲೆ, 34 ಪ್ರೌಢ ಶಾಲೆ, 19 ಪದವಿ ಪೂರ್ವ ಕಾಲೇಜು, 4 ಪದವಿ ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನಡೆಸುತ್ತಿದೆ. 2024-25ನೇ ಶೈಕ್ಷಣಿಕ ಸಾಲಿಗೆ 23,055 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ವರ್ಷ ಆರಂಭಗೊಂಡು ಎರಡೂವರೆ ತಿಂಗಳು ಪೂರೈಸಿದೆ. ಈವರೆಗೆ ಬಿಬಿಎಂಪಿಯ ವಿದ್ಯಾರ್ಥಿಗಳಿಗೆ ಶೂ ವಿತರಣೆ ಮಾಡಿಲ್ಲ.
ಕಳೆದ ವರ್ಷ ಶೂ ಸಾಕ್ಸ್ ವಿತರಣೆಯ ಗುತ್ತಿಗೆಯನ್ನು ಡಾ। ಬಾಬು ಜಗಜೀವನ್ ರಾಮ್ ಚರ್ಮ ಅಭಿವೃದ್ಧಿ ನಿಗಮ (ಲಿಡ್ಕರ್)ಗೆ ನೀಡಲಾಗಿತ್ತು. ಆದರೆ, ತುಂಬಾ ತಡವಾಗಿ ಶೂ ವಿತರಣೆ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಸುದರ್ಶನ್ ಆ್ಯಂಡ್ ಕೋ ಎಂಬ ಖಾಸಗಿ ಸಂಸ್ಥೆಗೆ ₹90 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಹುತೇಕ ಒಂದು ತಿಂಗಳಾಗಿದೆ.
ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯು ಈವರೆಗೆ ಬಿಬಿಎಂಪಿಗೆ ಬ್ಯಾಂಕ್ ಗ್ಯಾರಂಟಿ ನೀಡದ ಹಿನ್ನೆಲೆಯಲ್ಲಿ ಶೂ- ಸಾಕ್ಸ್ ವಿತರಣೆಗೆ ಬಿಬಿಎಂಪಿ ಕಾರ್ಯದೇಶ ನೀಡಿಲ್ಲ. ಹೀಗಾಗಿ, ಮಕ್ಕಳಿಗೆ ಶೂ- ಸಾಕ್ಸ್ ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುತ್ತಿಗೆ ಪಡೆದ ಸಂಸ್ಥೆಯು ಬ್ಯಾಂಕ್ ಗ್ಯಾರಂಟಿ ನೀಡಿದ ಮೇಲೆ ಬಿಬಿಎಂಪಿಯು ಕಾರ್ಯಾದೇಶ ನೀಡಲಾಗುತ್ತದೆ. ಆ ಬಳಿಕ ವಿದ್ಯಾರ್ಥಿಗಳಿಗೆ ಶೂ -ಸಾಕ್ಸ್ ತಲುಪುವುದಕ್ಕೆ ಕನಿಷ್ಠ ಒಂದು ತಿಂಗಳು ಸಮಯ ಬೇಕಾಗಲಿದೆ. ಆ ವೇಳೆಗೆ ಶೈಕ್ಷಣಿಕ ವರ್ಷದ ಮಧ್ಯಾಂತರ ಅವಧಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಶೂ-ಸಾಕ್ಸ್ ವಿತರಣೆ ಮಾಡಲಾಗುತ್ತಿದೆ. ಕಪ್ಪು ಬಣ್ಣ ಹಾಗೂ ಬೂದು ಬಣ್ಣದ ತಲಾ ಒಂದೊಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಸ್ವೆಟರ್ ಹಣ ಬ್ಯಾಂಕ್ ಖಾತೆಗೆ
ಪ್ರತಿ ವರ್ಷ ಬಿಬಿಎಂಪಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ ಮಾಡಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಹಾಗೂ ವಿಳಂಬದ ಪೂರೈಕೆ ಹಿನ್ನೆಲೆಯಲ್ಲಿ ಕಳೆದ ವರ್ಷ ಎರಡು ಜೊತೆ ಸ್ವೆಟರ್ ಖರೀದಿಯ ಮೊತ್ತವನ್ನು ವಿದ್ಯಾರ್ಥಿಗಳ ಪೋಷಕರ ಬ್ಯಾಂಕ್ ಖಾತೆಗೆ ಬಿಬಿಎಂಪಿ ನೇರವಾಗಿ ಜಮಾ ಮಾಡಿತ್ತು. ಈ ಬಾರಿಯೂ ಅದೇ ರೀತಿ ಸ್ವೆಟರ್ ಹಣವನ್ನು ಡಿಬಿಟಿ ಮೂಲಕ ಅಕ್ಟೋಬರ್ ವೇಳೆ ಜಮಾ ಮಾಡುವುದಕ್ಕೆ ನಿರ್ಧರಿಸಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.