ಬೀದಿ ನಾಯಿಗಳ ಊಟಕ್ಕೆ ಸ್ಥಳ ನಿಗದಿ

| Published : May 25 2024, 01:33 AM IST

ಸಾರಾಂಶ

ಮುಖ್ಯ ಆಯುಕ್ತರಿಗೆ ಬಿಬಿಎಂಪಿ ಪಶುಪಾಲನೆ ವಿಭಾಗ ಪ್ರಸ್ತಾವ ಹೂಡಿದ್ದು, ಸ್ಥಳ ಗುರುತಿಸಿ ಆಹಾರ ನೀಡುವ ಫಲಕ ಅಳವಡಿಕೆಗೆ ಚಿಂತನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವುದಕ್ಕೆ ಬೀದಿ, ಬೀದಿಗಳಲ್ಲಿ ನಿರ್ದಿಷ್ಟ ಸ್ಥಳ ಗುರುತಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಪಾಲಿಕೆ ಪಶುಪಾಲನೆ ವಿಭಾಗದಿಂದ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರದಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಗಲಾಟೆಗಳು ನಡೆಯುತ್ತಿವೆ. ಕೆಲವರು ಶ್ವಾನಗಳಿಗೆ ಊಟ ಹಾಕುವುದನ್ನು ಪ್ರೋತ್ಸಾಹಿಸಿದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಬಿಎಂಪಿ ಪಶುಪಾಲನೆ ವಿಭಾಗ ಚಿಂತನೆ ನಡೆಸಿದೆ.

ಬೀದಿ ನಾಯಿಗಳು ಇರುವ ರಸ್ತೆ, ಮೈದಾನ ಸೇರಿದಂತೆ ಮೊದಲಾದ ಸ್ಥಳದಲ್ಲಿ ಸಾರ್ವಜನಿಕರು ಊಟ ಹಾಕುವುದಕ್ಕೆ ನಿರ್ದಿಷ್ಟ ಸ್ಥಳ ಗುರುತಿಸಲಿದೆ. ಸ್ಥಳಗಳನ್ನು ಸ್ಥಳೀಯರೇ ಹೊಂದಾಣಿಕೆ ಮಾಡಿಕೊಂಡು ಗುರುತಿಸಿಕೊಳ್ಳಬಹುದು. ಅಲ್ಲಿ ಬಿಬಿಎಂಪಿಯು ಬೀದಿ ನಾಯಿಗಳಿಗೆ ಊಟ ಹಾಕುವುದಕ್ಕೆ ಸಂಬಂಧಿಸಿದ ನಿರ್ದೇಶನ ಇರುವ ಫಲಕವನ್ನು ಅಳವಡಿಕೆ ಮಾಡಲಿದ್ದಾರೆ.

ಒಂದು ವೇಳೆ ಸ್ಥಳೀಯರು ಒಮ್ಮತದಿಂದ ಸ್ಥಳ ಗುರುತಿಸಿಕೊಳ್ಳದಿದ್ದರೆ ಬಿಬಿಎಂಪಿಯ ಅಧಿಕಾರಿಗಳೇ ಸ್ಥಳವನ್ನು ಗುರುತಿಸಿ ಊಟ ಹಾಕುವುದಕ್ಕೆ ವ್ಯವಸ್ಥೆ ಮಾಡಲಿದ್ದಾರೆ.

ಈ ಕುರಿತು ವಿವರಣೆ ನೀಡಿದ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕ ಡಾ। ರವಿಕುಮಾರ್‌, ಊಟ ಹಾಕುವುದಕ್ಕೆ ಸ್ಥಳ ಗುರುತಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಬಾಕಿ ಇದೆ. ಬಳಿಕ ಸ್ಥಳ ಗುರುತಿಸುವ ಕಾರ್ಯ ಆರಂಭಿಸಲಾಗುವುದು. ಜತೆಗೆ, ಊಟ ಹಾಕಿದ ಸ್ಥಳ ಸ್ವಚ್ಛಗೊಳಿಸುವುದು ಸೇರಿದಂತೆ ನಿರ್ವಹಣೆ ಬಗ್ಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.