ಸಾರಾಂಶ
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ನೌಕರರು ಇಂದು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದ ಆಡಳಿತ ಯಂತ್ರ ಸ್ಥಗಿತವಾಗುವ ಸಾಧ್ಯತೆಯಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಹ ಕಂದಾಯ ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.1 ರಂದು ಬಿಬಿಎಂಪಿ ನೌಕರರು ಸಾಮೂಹಿಕ ರಜೆ ಹಾಕಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಮುಷ್ಕರಕ್ಕೆ ಕರೆ ನೀಡಿದ್ದು, ಬೆಳಗ್ಗೆ 11 ಗಂಟೆಯಿಂದ ನಡೆಯುವ ಹೋರಾಟಕ್ಕೆ ರಾಜ್ಯದ ಎಲ್ಲಾ ಪಾಲಿಕೆಗಳು, ರಾಜ್ಯ ಸರ್ಕಾರಿ ಸಚಿವಾಲಯ ನೌಕರರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ತೆರಿಗೆ ಸಂಗ್ರಹಿಸುತ್ತಿದ್ದರೂ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಕೆಲ ಸಹ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇದನ್ನು ವಾಪಸ್ ಪಡೆಯಬೇಕು. ಹಲವು ವರ್ಷದಿಂದ ಖಾಲಿ ಇರುವ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಧಿಕಾರ ಪ್ರತ್ಯೋಜನೆಯನ್ನು ಪಾಲಿಸಬೇಕು. ಪಾಲಿಕೆಯ ವ್ಯಾಪ್ತಿ ಹೆಚ್ಚುತ್ತಿದ್ದರೂ ನೌಕರರ ನೇರ ನೇಮಕಾತಿ ನಡೆಯದೇ ಇರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು ತಕ್ಷಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ.ಹಲವು ವರ್ಷಗಳಿಂದ ಸಂಪ್ರದಾಯದಂತೆ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ 4 ವರ್ಷದಿಂದ ಜಯಂತಿಯನ್ನು ಆಚರಿಸದೇ ಇರುವುದರಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಉತ್ತಮ ಸೇವೆ ಸಲ್ಲಿಸಿದ ಬಿಬಿಎಂಪಿ ನೌಕರರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಬೇಕು ಎಂದು ಸಂಘ ಒತ್ತಾಯಿಸಿದೆ.