ಗಣೇಶ ಪ್ರತಿಷ್ಠಾಪನೆಗೆ ಅರ್ಜಿಗೆ ತುರ್ತಾಗಿ ಸ್ಪಂದಿಸಿ: ತುಷಾರ್‌

| Published : Aug 24 2024, 01:15 AM IST

ಗಣೇಶ ಪ್ರತಿಷ್ಠಾಪನೆಗೆ ಅರ್ಜಿಗೆ ತುರ್ತಾಗಿ ಸ್ಪಂದಿಸಿ: ತುಷಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ 24 ಗಂಟೆಯಲ್ಲಿ ಅನುಮತಿ ನೀಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ 24 ಗಂಟೆಯಲ್ಲಿ ಅನುಮತಿ ನೀಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಸೂಚಿಸಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗಣೇಶ ಚತುರ್ಥಿ ಸಲಕ ಸಿದ್ಧತೆ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಪಾಲಿಕೆ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಕೇಂದ್ರಗಳಿಗೆ ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಿ ಅಧಿಕಾರಿಗಳ ವಿವರಗಳನ್ನು ಬಿಬಿಎಂಪಿಯ ವೆಬ್‌ಸೈಟ್ ನಲ್ಲಿ ಸಾರ್ಜನಿಕರ ವೀಕ್ಷಣೆಗೆ ಪ್ರಕಟಿಸಬೇಕು. ಕಾಲಮಿತಿಯಲ್ಲಿ ಅನುಮತಿ ಸಿಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಕೆರೆಗಳ ಬಳಿಯಿರುವ ಕಲ್ಯಾಣಿಗಳನ್ನು ಸ್ವಚ್ಚತೆಗೊಳಿಸಬೇಕು, ಗಣೇಶ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಿ ಬ್ಯಾರಿಕೇಟ್‌, ಸಿಸಿ ಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್ ಗಳ ಸೌಲಭ್ಯವನ್ನು ಕಲ್ಪಿಸಬೇಕೆಂದು ನಿರ್ದೇಶಿಸಿದರು.

ವಿದ್ಯುತ್ ತಂತಿಗಳ ಪರಿಶೀಲಿಸಿ:

ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಬೆಸ್ಕಾಂನ ಅಧಿಕಾರಿ,ಸಿಬ್ಬಂದಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳನ್ನು ಪರಿಶೀಲಿಸಿ, ಎಲ್ಲಿಯೂ ಯಾವುದೇ ರೀತಿಯ ಅನಾಹುತಗಳಾಗಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಬೀದಿ ದೀಪ ವ್ಯವಸ್ಥೆ, ಮೆರವಣಿಗೆಗಳು ಸಾಗುವ ಮಾರ್ಗದಲ್ಲಿ ರಸ್ತೆ ಗುಂಡಿ ಇರಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ತುರ್ತು ವ್ಯವಸ್ಥೆ

ಗಣೇಶ ವಿಸರ್ಜನೆಯ ಕಲ್ಯಾಣಿಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ವಿಸರ್ಜನಾ ಸ್ಥಳದಲ್ಲಿ ಏನಾದರು ಅವಘಡಗಳು ನಡೆದರೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಜತೆಗೆ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ‌ ವಾಹನಗಳ ವ್ಯವಸ್ಥೆ ಮಾಡಲು ಸೂಚಿಸಿದರು. ಗಣೇಶ ವಿಸರ್ಜನೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುವ ಇಲಾಖಾ ವಾರು ನಿಯೋಜನೆಗೊಂಡ ಸಿಬ್ಬಂದಿಗೆ ಸಮವಸ್ತ್ರ ನೀಡಬೇಕು.

ಮೊಬೈಲ್ ಟ್ಯಾಂಕ್ ವ್ಯವಸ್ಥೆ

ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯಕತೆ ಇರುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲು ಸೂಚಿಸಿದರು. ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ವಿಶೇಷ ಆಯುಕ್ತರಾದ ಸುರಾಳ್ಕರ್ ವಿಕಾಸ್ ಕಿಶೋರ್, ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ಪಾಲಿಕೆ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಓಪಿ ತಯಾರಿಕಾ ಘಟಕಗಳ ಪರಿಶೀಲಿಸಿನಗರದಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದ್ದು, ಗಣೇಶ ಮೂರ್ತಿ ತಯಾರಿಕಾ ಘಟಕಗಳಿಗೆ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಲ್ಲಿ ಅವುಗಳನ್ನು ವಶಕ್ಕೆ ಪಡೆದು ತಯಾರಕರಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸುವಂತೆ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.