ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕೊಕಟನೂರದಲ್ಲಿ ವ್ಯಾಸಂಗ ಮಾಡುತ್ತಿರುವ 5 ಜನ ವಿದ್ಯಾರ್ಥಿಗಳು ಭಾರತೀಯ ಸೇನಾ ಅಗ್ನಿವೀರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸೇನೆಗೆ ನೇಮಕಗೊಂಡಿದ್ದಾರೆ.ಸವದಿ ಗ್ರಾಮದ ಮಹಾಂತೇಶ ಶಿವಪ್ಪ ಬಾಗೆಣ್ಣವರ, ಕೊಕಟನೂರ ಗ್ರಾಮದ ಭೈರಪ್ಪ ಸೋಮರಾಯ ಸಾವಳಗಿ, ದರ್ಶನ ಶಾಂತಿನಾಥ ರೋಡಣ್ಣವರ, ಶಿರಹಟ್ಟಿ ಗ್ರಾಮದ ಸಮ್ಮೇದ ಭರಮಪ್ಪ ಬಳೋಜಿ ಹಾಗೂ ಬಳವಾಡ ಗ್ರಾಮದ ಗಜಾನನ ಮಾಳಪ್ಪ ಮದಗುಣಕಿ ಭಾರತೀಯ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದು, ಸದರಿ ವಿದ್ಯಾರ್ಥಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಭಾರತೀಯ ಸೇನೆಯ ಅಗ್ನಿವೀರರಾಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿದರು.ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕ ಹರ್ಷ.ಎಸ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ, ನಿಲಯ ಪಾಲಕರಾದ ಬಿ.ಆರ್.ಯಲ್ಲಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ನಮ್ಮ ತಾಲೂಕಿನ 5 ಜನ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಓದುತ್ತ ಪರೀಕ್ಷೆ ಎದುರಸಿ ಪಾಸಾಗಿರುವುದು ನಮಗೆ ಹೆಮ್ಮೆಯ ಮತ್ತು ಸಂತಸದ ವಿಷಯವಾಗಿದೆ. ದೇಶದ ರಕ್ಷಣೆಯ ಸೇವೆ ಸಲ್ಲಿಸುವ ಸದಾವಕಾಶ ತಮಗೆ ದೊರಕಿದ್ದು ಇದು ನಿಮ್ಮ ಭಾಗ್ಯ. ಮುಂದಿನ ದಿನಗಳಲ್ಲಿ ತಮ್ಮ ತರಬೇತಿ ಹಾಗೂ ದೇಶ ರಕ್ಷಣೆಯ ಸೇವೆ ಯಶಸ್ವಿಯಾಗಲಿ.
-ಲಕ್ಷ್ಮಣ ಸವದಿ, ಶಾಸಕರು.