ಹೂವಿನಹಡಗಲಿ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಉತ್ತಮ ಕಾರ್ಯ ನಿರ್ವಹಣೆ ಮಾಡಿ, ವಾರ್ಷಿಕ ₹3500 ರಿಂದ ₹4000 ಕೋಟಿ ವಹಿವಾಟು ಮಾಡಿದೆ. ರೈತರಿಗೆ, ಸಣ್ಣ ಪುಟ್ಟ ವ್ಯಾವಾರಸ್ಥರಿಗೆ ಸಕಾಲದಲ್ಲಿ ಸಾಲ ನೀಡಿ, ನಿಗದಿತ ಸಮಯದೊಳಗೆ ಮರುಪಾವತಿ ಮಾಡಿ ಉತ್ತಮ ಹೆಸರು ಗಳಿಸಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕಿನ 34ನೇ ಶಾಖೆ, ಎಟಿಎಂ ಕೇಂದ್ರ ಹಾಗೂ ಕಾಮನ್ ಸರ್ವೀಸ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲ ಕಡೆ ರಾಷ್ಟ್ರೀಕೃತ ಬ್ಯಾಂಕುಗಳು ವಾರ್ಷಿಕ 35ರಿಂದ 40 ಕೋಟಿ ವಹಿವಾಟು ಮಾಡಲು ಹೆಣಗಾಡುತ್ತಿವೆ. ಆದರೆ ಬಿಡಿಸಿಸಿ ಬ್ಯಾಂಕುಗಳು ಸಾವಿರಾರು ಕೋಟಿ ವಹಿವಾಟು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಉತ್ತಂಗಿಯಂತಹ ಗ್ರಾಮದಲ್ಲಿ ನೂತನ ಶಾಖೆ ಆರಂಭದಿಂದ, ಈ ಭಾಗದ ಜನರಿಗೆ ಮತ್ತು ರೈತರಿಗೆ ಹೊಸ ಆರ್ಥಿಕ ವೇಗ ಸಿಗಲಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗಳಿಗೆ ಬ್ಯಾಂಕಿಂಗ್ ಈಗ ಮತ್ತಷ್ಟು ಹತ್ತಿರವಾಗಲಿವೆ. ಪ್ರತಿಯೊಬ್ಬರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದರು.ಬಿಡಿಸಿಸಿ ಬ್ಯಾಂಕ್ ಭವಿಷ್ಯದಲ್ಲಿ ಇನ್ನು ಹೆಚ್ಚಿನ ಶಾಖೆಗಳನ್ನು ತೆರೆಯುವ ಮೂಲಕ, ಜನಸೇವೆಯಲ್ಲಿ ಮುಂಚೂಣಿಯಲ್ಲಿ ಬರಲಿ ಎಂಬ ಆಶಾಭಾವನೆ ಹೊಂದಿದ್ದೇನೆ. ಈ ಭಾಗದಲ್ಲಿ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಈ ಸಹಕಾರಿ ಕ್ಷೇತ್ರದ ಹಿಂದೆ ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ಪರಿಶ್ರಮದ ಕೊಡುಗೆ ಅಪಾರವಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಐ. ದಾರುಕೇಶ ಮಾತನಾಡಿ, ರೈತ ಸಮುದಾಯಕ್ಕೆ ಆರ್ಥಿಕವಾಗಿ ಅನುಕೂಲವಾಗಲು ಹೊಸ ಯೋಜನೆಗಳನ್ನು ಜಾರಿಗೆ ಮಾಡುತ್ತಿದ್ದೇವೆ. ಇನ್ನು ಹಲವು ಕಡೆಗಳಲ್ಲಿ ನೂತನ ಶಾಖೆಗಳನ್ನು ಆರಂಭಿಸುವ ಚಿಂತನೆ ಇದೆ ಎಂದರು.ಶಾಸಕಿ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಸೊಸೈಟಿ ಹಾಗೂ ಬ್ಯಾಂಕುಗಳಲ್ಲಿ ಪಡೆದ ಸಾಲ ಸಕಾಲದಲ್ಲಿ ಮರು ಪಾವತಿಯಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ ಮಾತನಾಡಿ, ತಾಲೂಕಿನ 19 ಸಹಕಾರಿ ಸಂಘಗಳು ಸುಸುಸ್ಥಿಯಲ್ಲಿವೆ. ಉತ್ತಂಗಿ ಸೊಸೈಟಿಯಲ್ಲಿ ₹24 ಕೋಟಿ ಠೇವಣಿ ಇದೆ. ₹14 ಕೋಟಿ ಕೆಸಿಸಿ ಸಾಲ, ₹18 ಕೋಟಿ ಬಿಡಿಪಿ ಸಾಲವಿದೆ ಎಂದರು.
ಉತ್ತಂಗಿ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ. ವಿಜಯಕುಮಾರ, ತಿಪ್ಪೇಸ್ವಾಮಿ, ಟಿ.ಎಂ. ಚಂದ್ರಶೇಖರಯ್ಯ, ಚೊಕ್ಕ ಬಸವನಗೌಡ, ಆನಂದ, ಸಂದೀಪ ಸಿಂಗ್, ಮೂಕಯ್ಯ ಸ್ವಾಮಿ, ವೈ. ಅಣ್ಣಪ್ಪ, ಹುಲುಗಪ್ಪ, ಮುಖ್ಯ ಕಾರ್ಯನಿರ್ವಾಹಕ ಜಯಪ್ರಕಾಶ್, ಕನಕದಾಸ ಕುರಿ ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ. ಹನುಮಂತಪ್ಪ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಉಪಸ್ಥಿತರಿದ್ದರು.