ಬಿಡಿಸಿಸಿ ಬ್ಯಾಂಕ್‌ಗೆ ₹12.53 ಕೋಟಿ ನಿವ್ವಳ ಲಾಭ

| Published : Aug 25 2024, 01:55 AM IST

ಸಾರಾಂಶ

ರೈತರ ಜೀವನಾಡಿಯಾಗಿ ಬೆಳೆದು ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಬ್ಯಾಂಕ್ 48 ವರ್ಷಗಳಿಂದ ನಿರಂತರ ಲಾಭದಾಯಕವಾಗಿ ಮುನ್ನಡೆಯುತ್ತಿದೆ.

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) 2023-24ನೇ ಸಾಲಿನಲ್ಲಿ ₹12.53 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಡಿಸಿಸಿ ಬ್ಯಾಂಕ್ 2023-24ನೇ ಸಾಲಿನ ಮಹಾಜನ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ಜಿಲ್ಲೆಗಳ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಗ್ರಾಮೀಣ ಜನರ ಹಾಗೂ ರೈತರ ಜೀವನಾಡಿಯಾಗಿ ಬೆಳೆದು ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಬ್ಯಾಂಕ್ 48 ವರ್ಷಗಳಿಂದ ನಿರಂತರ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಇಂದಿನ ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ನವಪೀಳಿಗೆಯ ಬ್ಯಾಂಕ್‌ಗಳಂತೆ ಸಿಬಿಎಸ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಗ್ರಾಹಕರಿಗೆ ಎಲ್ಲ ವಿಧದ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದರು.

ಬ್ಯಾಂಕ್ ₹2553.92 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸ್ತುತ ಸಾಲಿನ ಮಾ.31ರಂತೆ ₹127.86 ಕೋಟಿ ಷೇರು ಬಂಡವಾಳ, ₹158.63 ಕೋಟಿ ಕಾಯ್ದಿಟ್ಟ ನಿಧಿ, ₹226.96 ಕೋಟಿ ಬ್ಯಾಂಕಿನ ಸ್ವಂತ ಬಂಡವಾಳ, ₹1563.90 ಕೋಟಿ ಠೇವಣಿ ಮೊತ್ತದೊಂದಿಗೆ ₹1511.03 ಕೋಟಿ ಸಾಲ ವಿತರಿಸಿದ್ದು, ₹1743.25 ಕೋಟಿ ಹೊರಬಾಕಿ ಸಾಲದ ಮೊತ್ತ ಹಾಗೂ ಬ್ಯಾಂಕಿನ ಒಟ್ಟು ಹೂಡಿಕೆಗಳು ₹643.05 ಕೋಟಿಯೊಂದಿಗೆ ಪ್ರಸ್ತುತ ವರ್ಷ ಬ್ಯಾಂಕಿನ ಒಟ್ಟು ಲಾಭ ₹12.53 ಕೋಟಿ ಆಗಿದೆ ಎಂದರು.

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬ್ಯಾಂಕಿನ ವ್ಯವಹಾರಗಳನ್ನು ವಿಸ್ತರಿಸಲು ಒಟ್ಟು 14 ಹೊಸ ಶಾಖೆಗಳನ್ನು ಪ್ರಾರಂಭಿಸಲು ಆರ್‌ಬಿಐನಿಂದ ಪರವಾನಗಿ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬ್ಯಾಂಕಿನ ಶಾಖೆಗಳು ಇಲ್ಲದ ಪ್ರದೇಶಗಳಲ್ಲೂ ಗ್ರಾಹಕರ ವ್ಯವಹಾರದ ಅನುಕೂಲಕ್ಕಾಗಿ ಹೊಸದಾಗಿ ಎಟಿಎಂ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಿ ಆನ್‌ಲೈನ್ ಮೂಲಕವೇ ರೈತರಿಗೆ ಕೆಸಿಸಿ ಸಾಲಗಳನ್ನು ನೀಡಲು ಹಾಗೂ ₹10 ಲಕ್ಷವರೆಗೆ ಬ್ಯಾಂಕಿನ ಮೂಲಕ ನೇರವಾಗಿ ರೈತರಿಗೆ ಸ್ವಾಭಿಮಾನಿ ಕಿಸಾನ್ ಕ್ರೆಡಿಟ್ ಸಾಲ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹರಪನಹಳ್ಳಿ ಶಾಸಕಿ, ಬ್ಯಾಂಕ್ ನಿರ್ದೇಶಕಿ ಎಂ.ಪಿ. ಲತಾ, ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಆಡಳಿತ ಮಂಡಳಿ ಸದಸ್ಯರಾದ ಚೊಕ್ಕ ಬಸವನಗೌಡ, ಎಲ್.ಎಸ್. ಆನಂದ, ಚಿದಾನಂದ ಐಗೋಳ, ಪಿ.ಮೂಕಯ್ಯಸ್ವಾಮಿ, ವೈ.ಅಣ್ಣಪ್ಪ, ಬಿ.ನವೀನ್ ಕುಮಾರ್ ರೆಡ್ಡಿ, ಹುಲುಗಪ್ಪ ನಾಯಕರ, ಜೆ.ಎಂ.ಶಿವಪ್ರಸಾದ್, ವಿ.ಆರ್. ಸಂದೀಪ್ ಸಿಂಗ್, ಪಿ.ವಿಶ್ವನಾಥ, ಟಿ.ಎಂ.ಚಂದ್ರಶೇಖರಯ್ಯ, ಸಿಇಒ ಬಿ.ಜಯಪ್ರಕಾಶ್, ಉಪಪ್ರಧಾನ ವ್ಯವಸ್ಥಾಪಕರಾದ ಡಿ.ಶಂಕರ್, ಶಶಿಕಾಂತ ಹೆಸರೂರು, ಕೆ.ತಿಮ್ಮಾರೆಡ್ಡಿ, ಸಿ.ಮರಿಸ್ವಾಮಿ, ಮಾಗಳ ಕೊಟ್ರೇಶಪ್ಪ, ಕೆ.ಪಿ.ಉಮಾಪತಿ, ಎಸ್.ಎಲ್.ಬೆನ್ನೂರು ಮತ್ತಿತರರಿದ್ದರು.