ಬೆಂಗಳೂರಿನಲ್ಲಿ ನಡೆದ ಅಪೆಕ್ಸ್ ಬ್ಯಾಂಕ್‌ನ ಮಹಾಸಭೆಯಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ಗೆ 2023-24ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ಸಾಧನಾ ಪ್ರಶಸ್ತಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಬೆಂಗಳೂರಿನಲ್ಲಿ ನಡೆದ ಅಪೆಕ್ಸ್ ಬ್ಯಾಂಕ್‌ನ ಮಹಾಸಭೆಯಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ಗೆ 2023-24ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ಸಾಧನಾ ಪ್ರಶಸ್ತಿ ನೀಡಲಾಯಿತು.ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹಾಗೂ ಬ್ಯಾಂಕ್‌ನ ಸಿಇಒ ಬಿ. ಜಯಪ್ರಕಾಶ್ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ ಮತ್ತು ಆಡಳಿತ ಮಂಡಳಿಯ ನಿರ್ದೇಶಕರಿಂದ ಪ್ರಶಸ್ತಿ ಸ್ವೀಕರಿಸಿದರು. ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ದಾರುಕೇಶ ಐ. ಹಾಗೂ ನಿರ್ದೇಶಕರಾದ ಟಿ.ಎಂ. ಚಂದ್ರಶೇಖರಯ್ಯ, ಚಿದಾನಂದ ಐಗೋಳ, ಮೂಕಯ್ಯಸ್ವಾಮಿ, ನವೀನ ಕುಮಾರ ರೆಡ್ಡಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದರು.
ಕಳೆದ ತಿಂಗಳು ನಬಾರ್ಡ್‌ನಿಂದ ಅತ್ಯುತ್ತಮ ಜಿಲ್ಲಾ ಸಹಕಾರ ಬ್ಯಾಂಕ್ ಪುರಸ್ಕಾರಕ್ಕೆ ಪಾತ್ರವಾಗಿದ್ದ ಬ್ಯಾಂಕ್ ಈಗ ಅಪೆಕ್ಸ್ ಬ್ಯಾಂಕ್‌ನಿಂದ ಕೂಡ ಪ್ರಶಸ್ತಿಗೆ ಭಾಜನವಾಗಿದ್ದು ಬ್ಯಾಂಕಿನ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಬ್ಯಾಂಕ್ ನವಯುಗದ ಬ್ಯಾಂಕ್‌ಗಳಂತೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ತನ್ನ ಗ್ರಾಹಕರಿಗೆ ತಲುಪಿಸುವಲ್ಲಿ ಅದ್ವಿತೀಯ ಸಾಧನೆ ಮಾಡಿದೆ. 2022ರಲ್ಲಿ ರಾಜ್ಯದಲ್ಲಿಯೇ ಯುಪಿಐ ಸೇವೆಯನ್ನು ಅಳವಡಿಸಿಕೊಂಡು ಮೊದಲ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ.ಬ್ಯಾಂಕಿನ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ಬ್ಯಾಂಕ್ ಇದೇ ವರ್ಷದಲ್ಲಿ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳಿಂದ ಮೆಚ್ಚುಗೆ ಪಡೆದು ಪ್ರಶಸ್ತಿ ಪುರಸ್ಕಾರ ಪಡೆದಿದ್ದು ಅತೀವ ಸಂತಸ ತಂದಿದೆ. ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಅಪಾರ ಸಹಕಾರದಿಂದ ಈ ಪ್ರಶಸ್ತಿ ಬಂದಿದೆ ಮತ್ತು ಬ್ಯಾಂಕ್‌ನ ಸಿಇಒ ಮತ್ತು ನೌಕರರೆಲ್ಲರ ಈ ಸಾಧನೆಗೆ ಅಭಿನಂದನಾರ್ಹರು ಮತ್ತು ಬ್ಯಾಂಕಿನ ಜೊತೆ ಇರುವ ಸದಸ್ಯ ಸಹಕಾರಿ ಸಂಘಗಳಿಗೂ ಹಾಗೂ ಅವಳಿ ಜಿಲ್ಲೆಯ ಸಹಕಾರಿ ಗ್ರಾಹಕರಿಗೆ ಸದಾ ಅಭಾರಿಯಾಗಿದ್ದೇವೆ ಎಂದಿದ್ದಾರೆ.