ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಸೇರಿ ಪರಭಾಷಿಕರ ಉಪಟಳ ಮಿತಿಮೀರುತ್ತಿದೆ. ನಮ್ಮಿಂದಲೇ ಬೆಂಗಳೂರು, ನಾವಿಲ್ಲ ಎಂದರೆ ಬೆಂಗಳೂರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಿತಿಮೀರಿ ವರ್ತಿಸುತ್ತಿರುವ ಹಿಂದಿವಾಲಾಗಳಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.
ನಾವೆಲ್ಲರೂ ಬೆಂಗಳೂರು ಬಿಟ್ಟರೆ ನಿಮ್ಮ ನಗರ ಖಾಲಿ. ಬೆಂಗಳೂರೇ ಕಣ್ಮರೆಯಾಗುತ್ತದೆ ಎಂದು ಈ ಹಿಂದೆ ಸುಗಂಧ ಶರ್ಮಾ ಎಂಬಾಕೆ ಅವಹೇಳನ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು.
ಇಂತಹದ್ದೇ ಮತ್ತೊಂದು ಘಟನೆ ಹಳೇ ಏರ್‌ಫೋರ್ಟ್ ರಸ್ತೆಯ ಮುರುಗೇಶ್‌ಪಾಳ್ಯದ ಎನ್.ಎಸ್.ಆರ್ಕೇಡ್ ಬಳಿ ಶನಿವಾರ ನಡೆದಿದೆ. ಹಿಂದಿವಾಲಾನೊಬ್ಬ ಕನ್ನಡಿಗನ ಜತೆಗೆ ಕಿರಿಕ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಯುವತಿ ಜತೆಗಿರುವ ಹೊರರಾಜ್ಯದ ವ್ಯಕ್ತಿ ಇದು ಬೆಂಗಳೂರು ಇರಬಹುದು. ಕನ್ನಡ ಅಲ್ಲ, ಹಿಂದಿ ಮಾತನಾಡು ಎಂದು ಕಾರು ಚಾಲಕ ಕನ್ನಡಿಗನೊಂದಿಗೆ ಜಗಳವಾಡಿದ್ದಾನೆ. ಇದಕ್ಕೆ ಕಾರು ಚಾಲಕ, ನೀನು ಬೆಂಗಳೂರಿಗೆ ಬಂದಿರುವುದು. ನೀನು ಕನ್ನಡ ಮಾತನಾಡು. ನಾನು ಹಿಂದಿ ಮಾತನಾಡುವುದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಆ ಹೊರರಾಜ್ಯದ ವ್ಯಕ್ತಿ ಹಿಂದಿಯಲ್ಲಿ ಹೇಳು ಎಂದು ದುರಂಹಕಾರ ಪ್ರದರ್ಶಿಸಿದ್ದಾನೆ.
ಈ ಹಿಂದೆಯೂ ಚಂದಾಪುರದ ಲೇಔಟ್ ಒಂದರ ರಸ್ತೆಗಳಿಗೆ ಕನ್ನಡ ಸಾಹಿತಿಗಳ ಹೆಸರು ಇಡಲು ಅಡ್ಡಿಪಡಿಸಿದ ಘಟನೆಯಲ್ಲಿ ಹಿಂದಿವಾಲಾಗೊಂದಿಗೆ ಹೊರ ರಾಜ್ಯದ ಇತರರು ಇದ್ದರು. ಇನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಹಿಂದಿಭಾಷಿಕ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಕನ್ನಡಿಗರೊಂದಿಗೆ ಆಗಾಗ ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಜಾಲತಾಣಗಳಲ್ಲಿ ಭಾರಿ ಆಕ್ರೋಶ
ಇತ್ತೀಚಿನ ದಿನದಲ್ಲಿ ಅನಿಯಂತ್ರಿತ ವಲಸೆಯಿಂದಾಗಿ ಕರ್ನಾಟಕದ ಕಾನೂನು ಸುವ್ಯವಸ್ಥೆಗೆ ದೊಡ್ಡ ಮಟ್ಟದ ಪೆಟ್ಟು ಬೀಳುತ್ತಿದೆ. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಕೊಲೆ, ಸಲುಗೆ, ದರೋಡೆ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕರ್ನಾಟಕದ ಅನ್ನ ತಿಂದು, ನೀರು ಕುಡಿದು, ಇಲ್ಲಿ ಉದ್ಯೋಗದಿಂದ ಜೀವನ ಕಟ್ಟಿಕೊಂಡು ಪರಭಾಷಿಕರು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಜೊತೆಗೆ ಕನ್ನಡವನ್ನೇ ತಿರಸ್ಕರಿಸಿ ಹಿಂದಿ ಮಾತನಾಡು ಎನ್ನುವಷ್ಟರ ಮಟ್ಟಿಗೆ ಬೆಳೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಕೇಸ್ ದಾಖಲು?
ಕನ್ನಡಿಗರನ್ನು ಅವಮಾನ ಮಾಡಿ ಹಿಂದಿ ಮಾತನಾಡುವಂತೆ ಬೆದರಿಕೆ ಹಾಕಿರುವ ಹಿಂದಿವಾಲಾ ವ್ಯಕ್ತಿ ಹುಡುಕಾಟಕ್ಕೆ ತೊಡಗಿರುವ ಕನ್ನಡಪರ ಸಂಘಟನೆಗಳು ಆತನ ವಿರುದ್ಧ ಕೇಸು ದಾಖಲು ಮಾಡಲು ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಕನ್ನಡಿಗನಿಗೆ ಅವಮಾನ ಮಾಡಿದವನನ್ನು ಪತ್ತೆ ಮಾಡಿ, ಆತನ ವಿರುದ್ಧ ಪ್ರತಿಭಟಿಸುವುದಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕನ್ನಡಪ್ರಭಕ್ಕೆ ತಿಳಿಸಿದರು.