ಉನ್ನತ ಅಧಿಕಾರಿಗಳಾಗಿ ಇತರರಿಗೆ ಮಾದರಿಯಾಗಿ

| Published : Jun 17 2024, 01:38 AM IST

ಸಾರಾಂಶ

ಹಿಂದೂ ಸಾದರ ಸಂಘದ ಅಡಿಯಲ್ಲಿ ನಡೆಯುತ್ತಿರುವ ಐದಕ್ಕೂ ಹೆಚ್ಚು ಸಂಸ್ಥೆಗಳು ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು, ಸಮುದಾಯದ ಮಕ್ಕಳು ಇದರ ಲಾಭ ಪಡೆದು ಶೈಕ್ಷಣಿಕವಾಗಿ ಮೇಲೆ ಬರಬೇಕೆಂದು ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಹಿಂದೂ ಸಾದರ ಸಂಘದ ಅಡಿಯಲ್ಲಿ ನಡೆಯುತ್ತಿರುವ ಐದಕ್ಕೂ ಹೆಚ್ಚು ಸಂಸ್ಥೆಗಳು ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು, ಸಮುದಾಯದ ಮಕ್ಕಳು ಇದರ ಲಾಭ ಪಡೆದು ಶೈಕ್ಷಣಿಕವಾಗಿ ಮೇಲೆ ಬರಬೇಕೆಂದು ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಮೂರ್ತಿ ತಿಳಿಸಿದರು.

ನಗರದ ಹಿಂದೂ ಸಾದರ ಸಮುದಾಯ ಭವನದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ತುಮಕೂರು ಸಮಾನ ಮನಸ್ಕರ ಐಎಎಸ್, ಐಪಿಎಸ್ ತರಬೇತಿ ವೇದಿಕೆ, ಬೆಂಗಳೂರು ವತಿಯಿಂದ ಆಯೋಜಿಸಿದ್ದ, ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಐದು ವರ್ಷಗಳಿಂದ ಹಿಂದೂ ಸಾದರ ಸಂಘದ ಅಡಿಯಲ್ಲಿ ತುಮಕೂರು, ಬೆಂಗಳೂರು ಮತ್ತು ಗೌರಿ ಬಿದನೂರಿನಲ್ಲಿ ವಿವಿಧ ಸಂಸ್ಥೆಗಳು ಸಮುದಾಯದ ಮಕ್ಕಳಿಗಾಗಿ ಬಡಮಕ್ಕಳ ಹಾಸ್ಟೆಲ್ ಶುಲ್ಕ ಭರಿಸುವುದು, ಮೆಡಿಕಲ್, ಇಂಜಿನಿಯಿರಿಂಗ್ ಓದುತ್ತಿರುವ ಮಕ್ಕಳಿಗೆ ನೆರವು ನೀಡುವ ಕೆಲಸ ಮಾಡುತ್ತಿವೆ. ಸಮಾಜದಿಂದ ಅಲ್ಪಸ್ವಲ್ಪ ಸಹಾಯ ಪಡೆದು ಪರಿಶ್ರಮದಿಂದ ಅರ್ಥಿಕವಾಗಿ ಸದೃಢರಾದ ಸಮುದಾಯದ ಯುವಕರು ಸಹ ನಮ್ಮೊಂದಿಗೆ ಕೈಜೋಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಸಹಾಯ ದೊರೆಯುವ ವಿಶ್ವಾಸವಿದೆಕಳೆದ 30 ವರ್ಷಗಳ ಹಿಂದೆ ಹಿರಿಯರಾದ ಲಕ್ಷ್ಮಿನರಸಿಂಹಯ್ಯ ಮತ್ತು ಇನ್ನಿತರರ ಮಾರ್ಗದರ್ಶನದಂತೆ ಸಮಾನ ಮನಸ್ಕ ಗೆಳೆಯರು ಸೇರಿ ಕಟ್ಟಿದ ಸ್ವಾಮಿ ವಿವೇಕಾನಂದ ಸಹಕಾರ ಸಂಘದಲ್ಲಿ ಎಲ್ಲ ಸಮುದಾಯದ ಜನರು ಸದಸ್ಯರಾಗಿದ್ದಾರೆ. ಇದರ ಅಡಿಯಲ್ಲಿ 8 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ತೆರೆದು 5 ವರ್ಷಗಳಿಂದ ವಾರ್ಷಿಕ 3-4 ಲಕ್ಷ ರು.ಗಳನ್ನು ಖರ್ಚು ಮಾಡಿ, ಪ್ರತಿಭಾ ಪುರಸ್ಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ, ಸಾಧಕರಿಗೆ ಸನ್ಮಾನ ನಡೆಸಲಾಗುತ್ತಿದೆ. ಈ ಬಾರಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಈ ವರ್ಷದಿಂದ ಸಮಾಜದ ಅತ್ಯಂತ ಕಡುಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ ಹಾಸ್ಟೆಲ್ ಶುಲ್ಕ ಭರಿಸುವ ಕುರಿತು ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ಸಮಿತಿ ರಚಿಸಲಾಗಿದೆ. ಸಮಿತಿಯ ತೀರ್ಮಾನ ಅಂತಿಮವಾಗಿದ್ದು, ಯಾವುದೇ ಶಿಫಾರಸ್ಸಿಗೆ ಅವಕಾಶವಿಲ್ಲ ಎಂದರು.

ಸಮಾನ ಮನಸ್ಕ ಐಎಎಸ್, ಐಪಿಎಸ್ ತರಬೇತಿ ವೇದಿಕೆಯಿಂದ ಸುಮಾರು ೧೩ ಜನ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶುಲ್ಕವನ್ನು ಭರಿಸಲಾಗುತ್ತಿದೆ. ರಾಜಕೀಯವಾಗಿ ಯಾವುದೇ ಅಧಿಕಾರವನ್ನು ಪಡೆಯಲು ಸಾಧ್ಯವಿಲ್ಲದ ಸಾದರ ಸಮುದಾಯ, ಸರಕಾರಿ ನೌಕರಿಯಲ್ಲಿ ಹೆಚ್ಚು ಪಾಲು ಪಡೆಯಲಿ ಎಂಬ ಉದ್ದೇಶದಿಂದ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು. ಡಾ. ಗಂಗಾಧರಯ್ಯ ಮಾತನಾಡಿ, ಪಾಶ್ಚಿಮಾತ್ಯ ಜೀವನ ಶೈಲಿಯ ಫಲವಾಗಿ ಯುವಜನರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರಕ್ಕೆ ಮಾರು ಹೋಗುತ್ತಿರುವ ಪರಿಣಾಮ ಹದಿ ಹರೆಯದಲ್ಲಿಯೇ ಹೃದ್ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಳ್ಳಿಗಾಡಿನ ರೊಟ್ಟಿ, ಮುದ್ದೆ, ಸೊಪ್ಪು, ತರಕಾರಿಗಳಿಂದ ದೂರವಾಗಿ,ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿಯಿಂದಾಗಿ ಬಹುಬೇಗ ರೋಗಕ್ಕೆ ದೇಹ ಅವಕಾಶ ಮಾಡಿಕೊಡುತ್ತಿದೆ. ಶಿಸ್ತು ಬದ್ಧ ಆಹಾರ ಕ್ರಮ, ಒತ್ತಡ ರಹಿತ ಜೀವನ ಶೈಲಿಯಿಂದ ನಾವು ಬಹುಕಾಲ ಆರೋಗ್ಯವಂತ ಜೀವನ ನಡೆಸಬಹುದು. ಮನಸ್ಸು ಮತ್ತು ದೇಹ ಎರಡರ ಆರೋಗ್ಯ ಸರಿ ಇರಬೇಕೆಂದು ಸಲಹೆ ನೀಡಿದರು.ವೈದ್ಯ ಅಕಾಡೆಮಿ ನಿರ್ದೇಶಕ ಚಂದ್ರಶೇಖರ್ ಅವರು ನೀಟ್ ಪರೀಕ್ಷೆ ತಯಾರಿ, ಪ್ರಶ್ನೆ ಪತ್ರಿಕೆ, ಉತ್ತರ ಬರೆಯುವ ವಿಧಾನ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅಪ್‌ಲೈಡ್ ಸೈನ್ಸ್ ಕುರಿತು ಡಾ.ಅಶ್ವಥರಾಮಯ್ಯ ಮಕ್ಕಳಿಗೆ ಮಾಹಿತಿ ನೀಡಿದರು. 250ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಬಿ.ಆರ್.ರಮೇಶ್, (ನ್ಯೂಬ್ರೆಲಿಯಂಟ್) ಎಜುಕೇಷನ್ ಸೊಸೈಟಿಯ ಸಿಇಒ ರಾಕೇಶ್.ಎಸ್., ಡಿವೈಎಸ್ಪಿ ಪ್ರವೀಣ.ಎಂ, ರಾಜೇಶ್, ರವಿಶಂಕರ್, ಮಲ್ಲಿಕಾರ್ಜುನಯ್ಯ, ಟ್ರಸ್ಟ್‌ನ ಪದಾಧಿಕಾರಿಗಳು, ನಿರ್ದೇಶಕರು ಇತರರು ಇದ್ದರು.