ಸಾರಾಂಶ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಫೆ.೨೦ರಿಂದ ಪ್ರಾರಂಭವಾಗುವ ಪಟ್ಟಣದ ದುರ್ಗಾದೇವಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ, ಜಾತ್ರಾ ಉತ್ಸವ ಸಮಿತಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ಫೆ.೨೦ರಿಂದ೨೬ರವರೆಗೂ ದುರ್ಗಾದೇವಿ ಜಾತ್ರೆ ಪ್ರಾರಂಭವಾಗುತ್ತಿದೆ. ಜಾತ್ರೆಗೆ ಬರುವ ಭಕ್ತರು ಇದೇ ಮಾರ್ಗದಿಂದ ದೇವಸ್ಥಾನಕ್ಕೆ ಹೋಗಬೇಕು. ಆದ್ದರಿಂದ ರಸ್ತೆ ದುರಸ್ತಿಗೆ ದುರ್ಗಾದೇವಿ ಟ್ರಸ್ಟ್ ಕಮಿಟಿಯವರು ಮನವಿ ಮಾಡಿಕೊಂಡ ಹಿನ್ನೆಲೆ ರಸ್ತೆ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ದುರಸ್ತಿಗೆ ₹೪೯.೫೦ ಲಕ್ಷ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
ಈ ಕಾಮಗಾರಿ ನಿರ್ವಹಣೆಯಿಂದ ಭಕ್ತರು, ಜಾತ್ರೆಗೆ ಬರುವ ಭಕ್ತರ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.ಪಟ್ಟಣಕ್ಕೆ ಬರುವ ಭಕ್ತರಿಗೆ ನೀರಿನ ತೊಂದರೆಯಾಗಬಾರದೆಂದು ಹೊಸದಾಗಿ ೫ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದ್ದು, ಜಾತ್ರೆಯ ಸಮಯದಲ್ಲಿ ತುರ್ತು ವೆಚ್ಚಕ್ಕಾಗಿ ₹೫ ಲಕ್ಷ ಕಾಯ್ದಿರಿಸಲಾಗಿದೆ. ಅವಶ್ಯಕತೆ ಬಂದಲ್ಲಿ ಈ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದರು.
ವಾಯುವ್ಯ ಸಾರಿಗೆ ಘಟಕದಿಂದ ಜಾತ್ರೆಯ ಸಮಯದಲ್ಲಿ ಬರುವ ಭಕ್ತಾದಿಗಳಿಗೆ ಪ್ರಯಾಣಕ್ಕೆ ತೊಂದರೆಯಾಗದಂತೆ ಸಮರ್ಥವಾಗಿ ಕಾರ್ಯ ನಿಭಾಯಿಸಬೇಕು. ಅಗತ್ಯ ಬಿದ್ದಲ್ಲಿ ವಿವಿಧ ಸಾರಿಗೆ ಘಟಕಗಳಿಂದ ಹೆಚ್ಚುವರಿ ಬಸ್‌ಗಳನ್ನು ತರಿಸಿಕೊಂಡು ಬಸ್ ವ್ಯವಸ್ಥೆ ಮಾಡಲು ಸೂಚಿಸಿದರು.ಹೆಸ್ಕಾಂ ಅಧಿಕಾರಿಗಳು ಜಾತ್ರೆ ನಡೆಯುವ ಸಮಯದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ವ್ಯತ್ಯಯದಿಂದ ಯಾವುದೇ ಅಹಿತಕರ ಘಟನೆಗಳು ಜರುಗಬಾರದು. ಒಂದು ವೇಳೆ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಬಂದಲ್ಲಿ ಪಕ್ಕದ ಶಿರಾಳಕೊಪ್ಪ ಗ್ರಿಡ್‌ನಿಂದ ಸಂಪರ್ಕ ಪಡೆದು ಜಾತ್ರೆ ಮುಗಿಯುವವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ದುಗಾದೇವಿ ಜಾತ್ರಾ ವ್ಯವಸ್ಥಾಪಕ ಕಮೀಟಿ ಸೇರಿದಂತೆ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ, ಸಹಯೋಗದಲ್ಲಿ ಜಾತ್ರೆಯು ಜರುಗುತ್ತಿದ್ದು, ಯಾವುದೇ ತೊಂದರೆಗಳು ಸಂಭವಿಸಿದಂತೆ ಜಾತ್ರೆ ಯಶಸ್ವಿಯಾಗುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಎಚ್. ಪ್ರಭಾಕರಗೌಡ, ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ, ದುರ್ಗಾದೇವಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಸನಾವುಲ್ಲಾ ಮಕಾನದಾರ, ರಮೇಶ ಕೋಡಿಹಳ್ಳಿ, ವಿಜಯಶ್ರೀ ಬಂಗೇರ, ಸುಧಾ ಚಿಂದಿ, ಕವಿತಾ ಹಾರ‍್ನಳ್ಳಿ, ಮುಖಂಡರಾದ ಗುರುಮೂರ್ತಿ ನಾಡಿಗೇರ, ಉದಯ ಕೊಲ್ಲಾಪುರ, ದುರುಗಪ್ಪ ನೀರಲಗಿ, ಸಿದ್ದನಗೌಡ ನರೇಗೌಡ್ರ, ವೆಂಕಟೇಶ ಉಪ್ಪಾರ, ಮಂಜು ತಂಬಾಕದ, ವಿನಯ ಪಾಟೀಲ, ಸತೀಶ ನಾಡಗೇರ, ಮಹಾದೇವಪ್ಪ ನಾಯ್ಕರ್, ಚನಬಸಪ್ಪ ತಿಪ್ಪಕ್ಕಳವರ್, ಹರೀಶ ಕಲಾಲ್, ಗದ್ದಿಗೇಪ್ಪ ಮಾರವಳಿ, ಮೈಲಾರಪ್ಪ ದಿಂದೆರ್ ಸೇರಿದಂತೆ ಜಾತ್ರಾ ಉತ್ಸವ ಹಾಗೂ ಟ್ರಸ್ಟ್ ಕಮಿಟಿಯ ಸದಸ್ಯರು ಇದ್ದರು.