ಪ್ರಾಮಾಣಿಕ ಕರ್ತವ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಲಿ: ಕೆ.ಸಿ ಸದಾನಂದಸ್ವಾಮಿ

| Published : Dec 25 2024, 12:50 AM IST

ಪ್ರಾಮಾಣಿಕ ಕರ್ತವ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಲಿ: ಕೆ.ಸಿ ಸದಾನಂದಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವೃತ್ತಿಯಲ್ಲಿ ಸೇವಾ ನಿವೃತ್ತಿ ಹೊಂದುವುದು ಸಹಜ. ತಮ್ಮ ಸೇವಾವಧಿಯಲ್ಲಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಕರ್ತವ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ರಟ್ಟೀಹಳ್ಳಿ: ವೃತ್ತಿಯಲ್ಲಿ ಸೇವಾ ನಿವೃತ್ತಿ ಹೊಂದುವುದು ಸಹಜ. ತಮ್ಮ ಸೇವಾವಧಿಯಲ್ಲಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಕರ್ತವ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ಪಟ್ಟಣದ ಸಂಚಾರಿ ಮತ್ತು ಜೆಎಂಎಫ್‌ಸಿ ಕೋರ್ಟ್ ಆವರಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಾನು ಹುಟ್ಟಿ ಬೆಳದ ರಟ್ಟೀಹಳ್ಳಿ ಪಟ್ಟಣದಲ್ಲಿ ನೂತನ ಕೋರ್ಟ್ ಪ್ರಾರಂಭಕ್ಕೆ ಶಾಸಕರು, ಮಾಜಿ ಶಾಸಕರು, ವಕೀಲರ ಹಾಗೂ ನನ್ನ ಹೋರಾಟದ ಫಲವಾಗಿ ಇಂದು ಕೋರ್ಟ್ ಕಲಾಪಗಳು ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಆದಷ್ಟು ಬೇಗ 3ಎಕರೆ 20 ಗುಂಟೆ ಮೀಸಲಿಟ್ಟ ಜಮೀನಿನಲ್ಲಿ ಕೋರ್ಟ್ ಕಟ್ಟಡ ಹಾಗೂ ನ್ಯಾಯಾಧೀಶರ ನಿವೇಶನ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನೀಸುತ್ತೇನೆ ಎಂದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ಪಟ್ಟಣದಲ್ಲಿ ನೂತನ ಕೋರ್ಟ್ ಪ್ರಾರಂಭವಾಗಿದ್ದು, ಈ ಭಾಗದ ಅಭಿವೃದ್ದಿಗೆ ಸಹಾಯಕಾರಿ ಮತ್ತು ಕಕ್ಷಿದಾರರಿಗೆ ಅನಕೂಲವಾಗಿದೆ. ಎಲ್ಲರ ಸಹಕಾರದಿಂದ ಮುಂಬರುವ ದಿನಗಳಲ್ಲಿ ವಾರಪೂರ್ತಿ ಕೋರ್ಟ್ ಕಲಾಪಗಳ ಪ್ರಾರಂಭವಾಗಲಿವೆ ಎಂದರು.

ಇತ್ತಿಚೆಗೆ ನಡೆದ ಚಳಿಗಾಲ ಅಧಿವೇಶನದಲ್ಲಿ ಪಟ್ಟಣದಲ್ಲಿ ತಾಲೂಕು ಆಡಳಿ (ಸುವರ್ಣ ಸೌಧ) ಕಟ್ಟಡ ನಿರ್ಮಾಣಕ್ಕೆ ₹8.60 ಕೋಟಿ ಅನಮೋದನೆ ಸಿಕ್ಕಿದ್ದು, ಶೀಘ್ರದಲ್ಲೆ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮ ನಡೆಸಲಾಗುವುದು. ಅದರಂತೆ, ಕೋರ್ಟ್ ಹಾಗೂ ನ್ಯಾಯಾಧೀಶರ ನಿವೇಶನ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಲಾಗುವುದು ಎಂದರು.

ಮಾಜಿ ಶಾಸಕ ಹಾಗೂ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬನ್ನಿಕೋಡ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ಮುಂದಿನ ತಿಂಗಳು ನಿವೃತ್ತಿ ಹೊಂದುತ್ತಿರುವ ಪಟ್ಟಣದ ನಿವಾಸಿ, ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಅವರ ನಿವೃತ್ತಿ ಜೀವನ ಅತ್ಯಂತ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ರಟ್ಟೀಹಳ್ಳಿಯಲ್ಲಿ ನ್ಯಾಯಾಲಯ ಪ್ರಾರಂಭಕ್ಕೆ ನಮಗೆ ಸಹಕಾರ ನೀಡಿದ ಅವರ ಸೇವೆ ಅನನ್ಯ. ಕಾರಣ ತಮ್ಮ ಸೇವಾ ನಿವೃತ್ತಿ ನಂತರವೂ ಸಮಾಜಕ್ಕೆ ಅವರ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದರು.

ಪಟ್ಟಣದ ಸಂಚಾರಿ ಮತ್ತು ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶೆ ಸವಿತಾ ಮುಕ್ಕಲ್, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ. ತೋಗರ್ಸಿ, ಕಾರ್ಯದರ್ಶಿ ಮಾರುತಿ ಜೋಕನಾಳ, ಶಂಕ್ರಪ್ಪ ಬಿದರಿ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು.