ಬೆಂಕಿ ಅವಘಡಗಳ ಬಗ್ಗೆ ಎಚ್ಚರವಿರಲಿ: ನಟರಾಜ್

| Published : Feb 26 2024, 01:35 AM IST

ಬೆಂಕಿ ಅವಘಡಗಳ ಬಗ್ಗೆ ಎಚ್ಚರವಿರಲಿ: ನಟರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಕಿ ಮನುಷ್ಯನ ಜೀವನಕ್ಕೆ ಅನಿವಾರ್ಯವಾಗಿದ್ದರೂ ಅಷ್ಟೇ ಅಪಾಯಕಾರಿಯೂ ಆಗಿದೆ. ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಅಗ್ನಿ ಅವಘಡಗಳನ್ನು ತಪ್ಪಿಸಬೇಕೆಂದು ನಗರದ ಅಗ್ನಿಶಾಮಕ ಠಾಣಾಧಿಕಾರಿ ನಟರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬೆಂಕಿ ಮನುಷ್ಯನ ಜೀವನಕ್ಕೆ ಅನಿವಾರ್ಯವಾಗಿದ್ದರೂ ಅಷ್ಟೇ ಅಪಾಯಕಾರಿಯೂ ಆಗಿದೆ. ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಅಗ್ನಿ ಅವಘಡಗಳನ್ನು ತಪ್ಪಿಸಬೇಕೆಂದು ನಗರದ ಅಗ್ನಿಶಾಮಕ ಠಾಣಾಧಿಕಾರಿ ನಟರಾಜ್ ತಿಳಿಸಿದರು.

ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಅಗ್ನಿಶಾಮಕ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಅಗ್ನಿ ಅವಘಡಗಳ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅಗ್ನಿ ಅವಘಡಗಳು ಸಂಭವಿಸುತ್ತಿವರ. ಮನೆ, ಕಾರ್ಖಾನೆ, ಉಗ್ರಾಣ, ಶಾಲಾಕಾಲೇಜುಗಳಲ್ಲಿ ಆಕಸ್ಮಿಕವಾಗಿ ಬೆಂಕಿಯ ಅವಾಂತರಗಳು ಕಾಣಿಸಿಕೊಂಡಾಗ ಅಗ್ನಿ ನಂದಕಗಳಿಂದ ಬೆಂಕಿಯನ್ನು ನಂದಿಸುವ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಗ್ನಿಯ ಮೂಲಗಳಾದ ಸಿಲಿಂಡರ್‌, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮುಂತಾದ ತೈಲಗಳ ಬಗ್ಗೆ ಬಹಳ ಎಚ್ಚರಿಕೆಯಿಂದರಬೇಕು. ಅದಕ್ಕಾಗಿ ಸರ್ಕಾರ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಅಗ್ನಿಶಾಮಕ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆದ್ದರಿಂದ ನೀವು ಜಾಗೃತರಾಗುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದ ಅವರು ಅಗ್ನಿ ಅನಾಹುತ ಸಂದರ್ಭದಲ್ಲಿ ಕೈಗೊಳ್ಳಬಹುದಾದ ರಕ್ಷಣಾ ಕ್ರಮ ಹಾಗೂ ವಿವಿಧ ರೀತಿಯ ಬೆಂಕಿ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.

ಠಾಣೆಯ ಪ್ರಮುಖ ಅಧಿಕಾರಿ ಚಿದಾನಂದ್ ಮಾತನಾಡಿ, ಅಗ್ನಿಯ ಅನಾಹುತಗಳಲ್ಲಿ ಮಕ್ಕಳು ಹೆದರದೆ, ಗಾಬರಿ, ಭಯಕ್ಕೊಳಗಾಗದೆ ಅಗ್ನಿ ನಂದಕಗಳಿಂದ ನಂದಿಸುವ ಕಾರ್ಯತಂತ್ರವನ್ನು ರೂಢಿಸಿಕೊಳ್ಳಬೇಕು. ಬೆಂಕಿ ಅವಾಂತರಕ್ಕೆ ಕಂಗಾಲಾಗದೆ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ನೀರಿನಲ್ಲಿ ಮುಳುಗಿರುವವರು, ಹೊಗೆಯ ರಾಶಿಯೊಳಗೆ ಸಿಲುಕಿರುವವರು, ಉಸಿರುಗಟ್ಟಿರುವ, ಸುರಂಗಗಳಲ್ಲಿ ಸಾಗುವಾಗ ಆಪತ್ತಿಗೆ ಸಿಲುಕಿಗೊಂಡಾಗ ಹೇಗೆ ಅವರನ್ನು ಸಂರಕ್ಷಿಸಬೇಕೆಂಬುದನ್ನು ತಿಳಿಯಬೇಕು ಎಂದರು.

ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ಪ್ರತಿ ವರ್ಷವೂ ನಮ್ಮ ಕಾಲೇಜಿನಲ್ಲಿ ಅಗ್ನಿಶಾಮಕ ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅಗ್ನಿ ಅಪಘಾತಕ್ಕೆ ಅವಸರವೇ ಕಾರಣವಾಗಿದ್ದು, ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಯಾವುದೇ ಅಪಾಯಗಳು ಸಂಭವಿಸುವುದಿಲ್ಲ. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಎಸ್.ಕೆ. ರಾಜಶೇಖರ್‌, ಉಪನ್ಯಾಸಕ ಎಸ್.ಬಿ. ಜಗದೀಶ್ ಸೇರಿದಂತೆ ಠಾಣಾ ಸಿಬ್ಬಂದಿ, ಶಿಕ್ಷಕರು ಮತ್ತಿತರಿದ್ದರು. ಈ ಸಂದರ್ಭದಲ್ಲಿ ಅಗ್ನಿ ಅವಘಡದಲ್ಲಿ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.