ಮಿದುಳಿನ ರೋಗವಾದ ಪಾರ್ಶ್ವವಾಯು ಬಗ್ಗೆ ಅರಿವಿರಲಿ

| Published : Nov 08 2024, 12:30 AM IST / Updated: Nov 08 2024, 12:31 AM IST

ಸಾರಾಂಶ

ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಪಾರ್ಶ್ವವಾಯುವಿನ ಬಗ್ಗೆ ಅರಿವಿರಲಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಾರ್ಶ್ವವಾಯು ಮಿದುಳಿನ ರೋಗ. ಮಿದುಳಿನಲ್ಲಿ ರಕ್ತ ಚಲನೆಯಲ್ಲಿ ವ್ಯತ್ಯಾಸವಾದಾಗ ಆಗುವಂತಹ ಒಂದು ಸಮಸ್ಯೆ. ರಕ್ತಸ್ರಾವ ಹಾಗೂ ರಕ್ತಹೀನತೆ ಆಗಿ ಪಾರ್ಶ್ವವಾಯು ಸಂಭವಿಸುತ್ತದೆ ಎಂದು ಎಸ್.ಎಸ್. ನಾರಾಯಣ ಆಸ್ಪತ್ರೆ ನರರೋಗ ತಜ್ಞ ಡಾ.ವೀರಣ್ಣ ಗಡದ್ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಅಂತರ ರಾಷ್ಟ್ರೀಯ ಪಾರ್ಶ್ವವಾಯು ದಿನದ ಅಂಗವಾಗಿ ನಡೆದ ಪಾರ್ಶ್ವವಾಯುವಿನ ಬಗ್ಗೆ ಅರಿವಿರಲಿ ವಿಷಯ ಕುರಿತ ಆರೋಗ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪಾರ್ಶ್ವವಾಯುವನ್ನು ಜೋಲಿ ಹೋಗುವುದು, ಕಣ್ಣು ಕಾಣದಿರುವುದು, ಬಾಯಿ ಸೊಟ್ಟಗಾಗುವುದು, ಕೈ, ಕಾಲು ಸ್ವಾಧೀನ ಕಳೆದುಕೊಳ್ಳುವುದು, ಮಾತು ತೊದಲುವುದರಿಂದ ಗುರುತಿಸಬಹುದು. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮಯ ಕಳೆಯದೇ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದರು.

ಪಾರ್ಶ್ವವಾಯು ಗುರುತಿಸಿದ ಮೇಲೆ ತಕ್ಷಣ ಸ್ಟ್ರೋಕ್ @ ರೆಡಿ ಆಸ್ಪತ್ರೆಗೆ ಕರೆದೊಯ್ಯಬೇಕು. ದಾವಣಗೆರೆಯಲ್ಲಿ ಎಸ್.ಎಸ್. ನಾರಾಯಣ ಆಸ್ಪತ್ರೆ ಸ್ಟ್ರೋಕ್ @ ರೆಡಿ ಕೇಂದ್ರ ಆಗಿರುತ್ತದೆ. ಪಾರ್ಶ್ವವಾಯು ಆದ 3 ಗಂಟೆ ಒಳಗಡೆ ಬಂದಲ್ಲಿ ನಾವು ಟೆನೆಕ್ಟೆಪ್ಲಾಸ್ ಇಂಜೆಕ್ಷನ್ ಕೊಟ್ಟಲ್ಲಿ ಸಂಪೂರ್ಣ ಗುಣವಾಗುವ ಸಾಧ್ಯತೆಗಳಿವೆ. ಪಾರ್ಶ್ವವಾಯು ಆದವರಿಗೆ ಕೊಬ್ಬರಿ ಎಣ್ಣೆ ಕುಡಿಸೋದು, ನಾಟಿ ಔಷಧಿ ಕೊಡಿಸೋದು ತಪ್ಪು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕೇಂದ್ರದ ನಿರ್ದೇಶಕ ಡಾ.ಗುರುಪ್ರಸಾದ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ರೇವಪ್ಪ, ಪೋಷಕರು, ಆಸ್ಪತ್ರೆ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.