ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಜಾಗರೂಕರಾಗಿರಿ: ಸೈಬರ್ ಭದ್ರತಾ ತರಬೇತುದಾರ ಲಿಂಗರಾಜು ಸಲಹೆ

| Published : Jul 06 2025, 11:48 PM IST

ಸಾರಾಂಶ

ಮೊಬೈಲ್, ಅಂತರ್ಜಾಲ ಬಳಕೆ ಹಿತಮಿತವಾಗಿರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಸಹ ಎದುರಾಗುತ್ತವೆ. ಶಿಕ್ಷಣ ಸಂಬಂಧಿ ವಿಚಾರಗಳಿಗೆ ಮಾತ್ರ ಮೊಬೈಲ್, ಅಂತರ್ಜಾಲ ಬಳಕೆ ಸೂಕ್ತ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವಸಮೂಹ ಅದರಲ್ಲೂ ಹೆಣ್ಣುಮಕ್ಕಳು ಅತಿ ಜಾಗರೂಕರಾಗಿ ಇರುವ ಅವಶ್ಯಕತೆ ಇದೆ ಎಂದು ಮೈಸೂರು ಅಪರಾಧ ತನಿಖಾ ದಳದ ಡಿವೈಎಸ್ಪಿ ಕಚೇರಿಯ ಸೈಬರ್ ಭದ್ರತಾ ತರಬೇತುದಾರ ಎಸ್. ಲಿಂಗರಾಜು ಸಲಹೆ ನೀಡಿದರು.

ನಗರದ ಅಪ್ಪಗೆರೆ ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ, ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳು ವಹಿಸಬೇಕಾದ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮೊಬೈಲ್ ಬಳಕೆ ತೀವ್ರಗೊಳ್ಳುತ್ತಿದೆ. ಯಾವುದೋ ರೀಲ್ಸ್‌ಗಳು, ಫೋಟೋಗಳು, ವೀಡಿಯೋಗಳನ್ನು ನೋಡುವ ಧಾವಂತದಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಅಪರಿಚಿತರು ಕಳಿಸುವ ಫೋಟೋಗಳು, ವೀಡಿಯೋಗಳನ್ನು ನೋಡುವ ಅವಶ್ಯಕತೆ ಇಲ್ಲ. ಅವುಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವುದು ಸರಿಯಲ್ಲ. ಜೊತೆಗೆ ಅನಧಿಕೃತ ಲಿಂಕ್‌ಗಳನ್ನು ಮುಟ್ಟಿ ಹಣ ಕಳೆದುಕೊಳ್ಳಬಹುದು. ಇದೆಲ್ಲದರ ಬಗ್ಗೆ ಜಾಗರೂಕರಾಗಬೇಕು ಎಂದರು.

ಮೊಬೈಲ್, ಅಂತರ್ಜಾಲ ಬಳಕೆ ಹಿತಮಿತವಾಗಿರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಸಹ ಎದುರಾಗುತ್ತವೆ. ಶಿಕ್ಷಣ ಸಂಬಂಧಿ ವಿಚಾರಗಳಿಗೆ ಮಾತ್ರ ಮೊಬೈಲ್, ಅಂತರ್ಜಾಲ ಬಳಕೆ ಸೂಕ್ತ. ಒಂದು ವೇಳೆ ಸೈಬರ್ ವಿಚಾರದಲ್ಲಿ ಯಾವುದೇ ತೊಂದರೆಗೆ ಸಿಲುಕಿದರೆ ತಕ್ಷಣ ಪ್ರಕರಣ ದಾಖಲಿಸಬೇಕು. ಇಂತಹ ಮೋಸಕ್ಕೆ ಒಳಗಾಗುವ ಮಂದಿಯ ಸಹಾಯಕ್ಕೆಂದು ಸೈಬರ್ ಅಪರಾಧ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಾಂಶುಪಾಲರಾದ ಸಿಸ್ಟರ್ ರಿನ್ಸಿ ಜೋಸೆಫ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಲ್ಲಿ ಸೈಬರ್ ಬಳಕೆಯ ಸಮಸ್ಯೆಯೂ ಒಂದು. ಮೊಬೈಲ್, ಅಂತರ್ಜಾಲ ಬಳಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ಅದರಿಂದಾಗುವ ಅನಾಹುತಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ವಹಿಸಬೇಕಾದ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಎಂ. ರಮೇಶ್, ವಹಿದಾ ತಸ್ನೀಮ್, ಸವಿತಾ, ಅಶ್ವಿನಿ, ಬಾಬುಪ್ರಸಾದ್, ಚೈತ್ರ ಲಕ್ಷ್ಮೀ, ಜನಾರ್ದನ್, ಶ್ರೀನಿವಾಸ್, ಸಿಬ್ಬಂದಿ ಜೂಡ್ ಅನಿಲ್, ಮರಿನಾ ಹಾಜರಿದ್ದರು.