ಹರಿಹರ ನಗರಸಭೆ ಕಡತಗಳ ಬಗ್ಗೆ ಎಚ್ಚರಿಕೆ ವಹಿಸಿ

| Published : Jul 10 2025, 12:46 AM IST

ಹರಿಹರ ನಗರಸಭೆ ಕಡತಗಳ ಬಗ್ಗೆ ಎಚ್ಚರಿಕೆ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಅತಿ ಹೆಚ್ಚು ಕಡತಗಳು ಮಾಯವಾಗುತ್ತಿವೆ. ಸಾರ್ವಜನಿಕ ಸೇವೆಯೂ ವಿಳಂಬವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಎಂ.ಎಸ್. ಕೌಲಾಪುರೆ ಸೂಚನೆ ನೀಡಿದ್ದಾರೆ.

- ಅಹವಾಲು ಸ್ವೀಕರಿಸಿ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಎಂ.ಎಸ್. ಕೌಲಾಪುರೆ

- - -

ಕನ್ನಡಪ್ರಭ ವಾರ್ತೆ ಹರಿಹರ ನಗರಸಭೆಯಲ್ಲಿ ಅತಿ ಹೆಚ್ಚು ಕಡತಗಳು ಮಾಯವಾಗುತ್ತಿವೆ. ಸಾರ್ವಜನಿಕ ಸೇವೆಯೂ ವಿಳಂಬವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಎಂ.ಎಸ್. ಕೌಲಾಪುರೆ ಸೂಚನೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆಯಲ್ಲಿ ಎ ಮತ್ತು ಬಿ ಖಾತಾ ವಿಲೇವಾರಿಯಲ್ಲಿ ಕಡತಗಳು ಮಂಗಮಾಯ ಆಗುವುದು, ಕಳೆದು ಹೋಗುತ್ತಿರುವುದು, ಸಾರ್ವಜನಿಕರನ್ನು ಬೇಕಾಬಿಟ್ಟಿ ಅಲೆದಾಡಿಸುವುದು ಸೇರಿದಂತೆ ನಗರಸಭೆ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ. ಮೇಲಾಧಿಕಾರಿಗಳು ಸಿಬ್ಬಂದಿ ಕಾರ್ಯ ಚಟುವಟಿಕೆಗಳ ಮೇಲೆ ಸೂಕ್ತ ಗಮನವಿಡಬೇಕು ಎಂದರು.

ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸರ್ಕಾರದ ಆಶಯದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಪೂರೈಸಿ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಸಾರ್ವಜನಿಕರೊಂದಿಗೆ ವಿನಯದಿಂದ ಮಾತನಾಡಬೇಕು. ಎಲ್ಲ ದಾಖಲೆಗಳನ್ನು ಒಂದೇ ಬಾರಿ ಪಡೆದು ಸಾಧ್ಯವಾದಷ್ಟು ಬೇಗನೇ ಅವರ ಕಾರ್ಯಗಳನ್ನು ಪೂರೈಸಿ, ಜನರ ಮೆಚ್ಚುಗೆಗೆ ಪಾತ್ರರಾಗಿ ಎಂದು ಸೂಚಿಸಿದರು.

ಮಳೆಗಾಲ ಪ್ರಾರಂಭವಾಗಿದ್ದು, ಕೃಷಿ ಅಧಿಕಾರಿಗಳು ಬಿತ್ತನೆಬೀಜ, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳ ಸಮರ್ಪಕ ವಿತರಣೆ ತ್ವರಿತ ಕ್ರಮ ಕೈಗೊಳ್ಳಬೇಕು. ಕಳಪೆ ಬಿತ್ತನೆಬೀಜಗಳ ವಿತರಿಸದೇ, ಗುಣಮಟ್ಟದ ಬೀಜಗಳ ವಿತರಣೆಗೆ ಹೆಚ್ಚಿನ ಗಮನ ನೀಡಬೇಕು. ರೈತರ ಬೇಸಾಯ ಕಾರ್ಯದಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಲ್ಲಿ ಅದರಲ್ಲೂ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೆಡುವ, ಮರಗಳನ್ನು ಪೋಷಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಬೇಕು. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಪೌಷ್ಟಿಕ ಆಹಾರ ವಿತರಣೆಗಳಲ್ಲಿ 500 ಗ್ರಾಂಗಳ ಪಾಕೆಟ್ ಇದ್ದು, ಅವುಗಳಲ್ಲಿ 300 ಗ್ರಾಂ ವಿತರಣೆ ಮಾಡಬೇಕಾಗುತ್ತದೆ. ಈ ಸಂದರ್ಭ ಒಡೆದ ಪಾಕೆಟ್‍ಗಳು ಅಥವಾ ಆಹಾರದ ಗುಣಮಟ್ಟ ಕಳಪೆ ಆಗಿದ್ದಲ್ಲಿ ಗಮನ ತರಬೇಕು. 500 ಗ್ರಾಂಗಳ ಪಾಕೇಟ್‍ಗಳ ಬದಲು 300 ಗ್ರಾಂಗಳ ಪ್ಯಾಕೆಟ್‍ಗಳನ್ನೇ ವಿತರಣೆ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಲು ತಾಕೀತು ಮಾಡಿದರು.

ರಾಜನಹಳ್ಳಿ ಗ್ರಾಮದ ಸರ್ವೆ ನಂಬರ್ 52/1ಬಿ 2 ಎಕರೆ 3 ಗುಂಟೆ ಜಮೀನಿನ ಸುಮಾರು 45 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಆದರೆ ಆ ಜಮೀನಿನಲ್ಲಿ ಕೆಲವರು ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದು, ಜಮೀನನ್ನು ತೆರೆವುಗೊಳಿ ಎಂದು ಆದೇಶಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 7 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅದರಲ್ಲಿ 1 ಅರ್ಜಿಯನ್ನು ನಮೂನೆ 1 ಮತ್ತು 2 ರಲ್ಲಿ ಸಲ್ಲಿಸುವಂತೆ ತಿಳಿಸಲಾಯಿತು. 1 ಅರ್ಜಿಯ ಬಗ್ಗೆ ಸಾಮಾನ್ಯ ತಿಳಿವಳಿಕೆ ನೀಡಿ ವಾಪಸ್ ನೀಡಲಾಯಿತು. ಉಳಿದ 5 ಅರ್ಜಿಗಳನ್ನು ಒಂದು ವಾರದಲ್ಲಿ ಪಾಲನಾ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಗಡುವು ನೀಡಿದರು.

ಈ ಸಮಯದಲ್ಲಿ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕಿ ಕೆ. ಕಲಾವತಿ, ಪೊಲೀಸ್ ನಿರೀಕ್ಷಕರಾದ ಎಚ್. ಗುರುಬಸವರಾಜ, ಪ್ರಭು ಬ. ಸೂರಿನ, ಬಿ.ಸರಳ ಮತ್ತು ಲೋಕಾಯುಕ್ತ ಪೊಲೀಸ್ ಸಿಬ್ಬಂದಿ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

- - -

-09ಎಚ್‍ಆರ್‍ಆರ್03.ಜೆಪಿಜಿ:

ಹರಿಹರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.