ಸಾರಾಂಶ
ವಿದ್ಯಾರ್ಥಿಗಳು ಗಾಂಜಾ ಹಾಗೂ ಡ್ರಗ್ಸ್ ಸೇವನೆ ಮಾಡಬಾರದು. ದುಶ್ಚಟಗಳ ಹಿಂದೆ ಹೋದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುವುದು. ಇದರಿಂದ ನಿಮ್ಮ ಭವಿಷ್ಯ ಮೊಟಕುಗೊಳ್ಳಲಿದೆ ಎಂದು ಎಸಿಪಿ ಶಿವಪ್ರಕಾಶ ಎಚ್ಚರಿಸಿದ್ದಾರೆ.
ಹುಬ್ಬಳ್ಳಿ:
ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಈ ಕುರಿತು ಯುವಕರು ಎಚ್ಚರಿಕೆ ವಹಿಸಬೇಕಿದೆ ಎಂದು ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಹೇಳಿದರು.ಹು-ಧಾ ನಗರ ಪೊಲೀಸ್ ಕಮೀಷನರೇಟ್‌ನ ಹುಬ್ಬಳ್ಳಿ ಉತ್ತರ ವಿಭಾಗದ ವಿದ್ಯಾನಗರ ಪೊಲೀಸ್ ಠಾಣೆಯಿಂದ ಕಿಮ್ಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಚೆನ್ನಮ್ಮ ಪಡೆ, ಸೈಬರ್ ಕ್ರೈಂ ಅಪರಾಧಗಳ ಜಾಗೃತಿ ಹಾಗೂ ಡ್ರಗ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮೂಲದಿಂದ ಅಪರಿಚಿತ ವ್ಯಕ್ತಿಗಳು ಪರಿಚಯ ಮಾಡಿಕೊಂಡು ಬೆದರಿಕೆ ಹಾಕುವ ಪ್ರಯತ್ನ ನಡೆಯುತ್ತಿರುತ್ತವೆ. ಅದರಿಂದ ಜಾಗೃತರಾಗಿ ಎಚ್ಚೆತ್ತುಕೊಳ್ಳಬೇಕಿರುವುದು ಅತ್ಯಗತ್ಯ. ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ 112 ನಂಬರಿಗೆ ಕರೆ ಮಾಡಿದರೇ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಹೆಣ್ಣುಮಕ್ಕಳಿಗೆ ತೊಂದರೆ ಆದಲ್ಲಿ ಚೆನ್ನಮ್ಮ ಪಡೆಗೆ ಮಾಹಿತಿ ನೀಡುವಂತೆ ತಿಳಿಸಿದರು.ವಿದ್ಯಾರ್ಥಿಗಳು ಗಾಂಜಾ ಹಾಗೂ ಡ್ರಗ್ಸ್ ಸೇವನೆ ಮಾಡಬಾರದೆಂದು ಸಲಹೆ ನೀಡಿದ ಅವರು, ದುಶ್ಚಟಗಳ ಹಿಂದೆ ಹೋದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುವುದು. ಇದರಿಂದ ನಿಮ್ಮ ಭವಿಷ್ಯ ಮೊಟಕುಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಸಿಇಎನ್ ಎಸಿಪಿ ಶಿವರಾಜ್ ಕಟಕಭಾವಿ, ಸಿಇಎನ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ, ಪಿಐ ಜಯಂತ ಗೌಳಿ, ಪ್ರಾಶುಂಪಾಲ ಈಶ್ವರ ಹೊಸಮನಿ, ಕಿಮ್ಸ್ ವಾರ್ಡನ್ ಕೆ.ಎಫ್. ಕಮ್ಮಾರ ಸೇರಿದಂತೆ ಕಿಮ್ಸ್ ವೈದ್ಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.