ಸಾರಾಂಶ
ಹಿರೇಕೆರೂರು ಪಟ್ಟಣದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕ ಯು.ಬಿ. ಬಣಕಾರ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.
ಹಿರೇಕೆರೂರು: ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಬೇಸಿಗೆ ಅವಧಿಯಲ್ಲಿ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಅಧಿಕಾರಿಗಳು ನಿಗಾ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಯಾದಿ ಸಿದ್ಧಪಡಿಸಿಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಮೂರರಿಂದ ನಾಲ್ಕು ಬಾಡಿಗೆ ರೂಪದಲ್ಲಿ ಪಡೆಯಲು ಕೊಳವೆ ಬಾವಿಗಳನ್ನು ಮೊದಲೇ ಗುರುತಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಬಂದ ಕೂಡಲೇ ವಿಳಂಬ ಮಾಡದೇ ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಬಾಡಿಗೆ ರೂಪದಲ್ಲಿ ಕೊಳವೆಬಾವಿ ಪಡೆದುಕೊಂಡಲ್ಲಿ ಅದರ ಮಾಹಿತಿಯನ್ನು ತ್ವರಿತವಾಗಿ ಕಾರ್ಯಪಡೆ ಸಮಿತಿಗೆ ನೀಡಬೇಕು. ಇಲ್ಲವಾದಲ್ಲಿ ಕೊಳವೆಬಾವಿ ಮಾಲೀಕರಿಗೆ ಬಾಡಿಗೆ ಹಣ ಪಾವತಿ ಮಾಡಲು ಸಮಸ್ಯೆಯಾಗುತ್ತದೆ ಎಂದು ಹೇಳಿದರು.ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ಸರಿಪಡಿಸಿ ಚಾಲನೆಯಲ್ಲಿರುವಂತೆ ನೋಡಿಕೊಳ್ಳಬೇಕು. ಜಲಜೀವನ್ ಮೀಷನ್ ಯೋಜನೆಯ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳು ತ್ವತರಿತವಾಗಿ ಪರಿಹರಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಇಒ ಮಲ್ಲಿಕಾರ್ಜುನ ಕೆ.ಎಂ., ಎಇಇ ಚಂದ್ರಪ್ಪ ಡಿ.ಎಚ್., ತಾಪಂ ಸಹಾಯಕ ನಿರ್ದೇಶಕ ನಾಗರಾಜಪ್ಪ ಹಡಗಲಿ, ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.