ಸಾರಾಂಶ
ಗಣೇಶ ವಿಸರ್ಜನೆ ವೇಳೆ ಬ್ಯಾರಿಕೇಡ್‌ಗಳನ್ನು ಹಾಕಿ ಸರದಿ ಸಾಲಿನಲ್ಲಿ ಮೂರ್ತಿ ವಿಸರ್ಜನೆಗೆ ಅನುಕೂಲ ಮಾಡಿಕೊಡಬೇಕು
ಧಾರವಾಡ: ಮುಂಬರುವ ಗಣೇಶ ಚತುರ್ಥಿ ಅಂಗವಾಗಿ ಹು-ಧಾ ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಶುಕ್ರವಾರ ಇಲ್ಲಿಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಭವನದಲ್ಲಿ ಮೇಯರ್ ಜ್ಯೋತಿ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿತು.
ಹಿಂದೂಗಳ ದೊಡ್ಡ ಹಾಗೂ ಮಹತ್ವದ ಹಬ್ಬಗಳಲ್ಲಿ ಗಣೇಶೋತ್ಸವ ಪ್ರಮುಖವಾಗಿದ್ದು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಈ ಹಬ್ಬದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಎಚ್ಚರ ವಹಿಸಿ ಸಿದ್ಧತೆ ಕೈಗೊಳ್ಳಬೇಕು. ಗಣಪತಿ ಪ್ರತಿಷ್ಠಾಪನೆ, ವಿಸರ್ಜನೆ ವೇಳೆ ಗದ್ದಲ-ಗೊಂದಲ ಆಗದಂತೆ ಪೊಲೀಸ ವ್ಯವಸ್ಥೆ, ಗಣಪತಿ ವಿಸರ್ಜನೆಗೆ ಬಾವಿಗಳ ಸ್ವಚ್ಛತೆ, ಬಾವಿಗಳಿಗೆ ಹೋಗಲು ರಸ್ತೆಗಳ ಸ್ಥಿತಿಗತಿ ಪರಿಶೀಲಿಸಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗಣೇಶ ವಿಸರ್ಜನೆ ವೇಳೆ ಬ್ಯಾರಿಕೇಡ್‌ಗಳನ್ನು ಹಾಕಿ ಸರದಿ ಸಾಲಿನಲ್ಲಿ ಮೂರ್ತಿ ವಿಸರ್ಜನೆಗೆ ಅನುಕೂಲ ಮಾಡಿಕೊಡಬೇಕು. ಮೂರ್ತಿ ವಿಸರ್ಜನೆಗೆ ಬೆಳಕಿನ ವ್ಯವಸ್ಥೆ, ತೆಗ್ಗು-ಗುಂಡಿಗಳನ್ನು ಮುಚ್ಚುವುದು, ಅನ್ನಸಂತರ್ಪಣೆ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಜಾಗದ ಅನುಕೂಲತೆ ಅಂತಹ ವಿಶೇಷ ಮುತುವರ್ಜಿ ವಹಿಸಬೇಕು. ಜತೆಗೆ ಮಂಡಳಿಗಳು ಕಡ್ಡಾಯವಾಗಿ ಪರವಾನಗಿ ಪಡೆದು ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಮೇಯರ್ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಗಣೇಶೋತ್ಸವಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗುತ್ತಿದ್ದು, ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ಬಗ್ಗೆ ಪೊಲೀಸ ಇಲಾಖೆ, ಪರಿಸರ ಮಂಡಳಿ ಜೊತೆಗೆ ಸಹಕಾರದಿಂದ ಪಿಓಪಿ ಮೂರ್ತಿಗಳ ಮಾರಾಟ ಆಗದಂತೆ ಎಚ್ಚರ ವಹಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಉಪ ಮೇಯರ್ ಸಂತೋಷ ಚವ್ಹಾಣ, ವಿರೋಧ ಪಕ್ಷದ ನಾಯಕ ಇಮ್ರಾನ ಎಲಿಗಾರ, ಹೆಚ್ಚುವರಿ ಆಯುಕ್ತ ವಿಜಯಕುಮಾರ, ಪಾಲಿಕೆ ಸದಸ್ಯರಾದ ಚಂದ್ರಕಲಾ ಕೊಟಬಾಗಿ, ಮಂಜುನಾಥ ಬಟ್ಟೆಣ್ಣವರ ಮತ್ತಿತರರು ಇದ್ದರು.