ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಮಳೆ ಕಡಿಮೆ ಹಿನ್ನೆಲೆಯಲ್ಲಿ ಈ ವರ್ಷ ಬಹುತೇಕ ಜನವರಿಯಿಂದಲೇ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಸೇರಿದಂತೆ ಕುಡಿಯುವ ನೀರಿಗೆ ಕೊರತೆ ಆಗದಂತೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಅಧಿಕಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.ತಾಲೂಕಿನ ಕುಡಿಯುವ ನೀರಿನ ಬಗ್ಗೆ ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಗ್ರಾಪಂಗಳ ಪಿಡಿಒ ಮತ್ತು ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳ ಮೂಲಕ ಕುಡಿಯುವ ನೀರಿಗೆ ಸಂಬಂಧಿಸಿ ಕೈಗೊಳ್ಳಲಾಗಿರುವ ಬಗ್ಗೆ ಮಾಹಿತಿ ಪಡೆದು ತಾಲೂಕಿನಲ್ಲಿ ಎಲ್ಲಿಯೂ ನೀರಿಗೆ ಕೊರತೆ ಆಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ತಾಲೂಕಿನ 38 ಗ್ರಾ.ಪಂ.ಗಳಲ್ಲಿ ಕೆಲವೇ ಗ್ರಾ.ಪಂ.ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆಗಳಲ್ಲಿ ನೀರಿನ ಸಮಸ್ಯೆ ಇರುವುದಾಗಿ ಶಾಸಕರ ಗಮನಕ್ಕೆ ತರಲಾಯಿತು. ಮುಖ್ಯವಾಗಿ ಕುಡುಮಲ್ಲಿಗೆ, ಗುಡ್ಡೇಕೊಪ್ಪ, ದೇಮ್ಲಾಪುರ, ಆಗುಂಬೆ, ಬಸವಾನಿ, ಹೊನ್ನೇತಾಳು ಮುಂತಾದ ಕಡೆಗಳಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಇರುವುದಾಗಿ ಮಾಹಿತಿ ನೀಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜೆಜೆಎಂ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು.ಜೆಜೆಎಂ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ಕೇಂದ್ರ ಸರ್ಕಾರದ ಬಹುನಿರೀಕ್ಷಿತ ₹150 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ ತಾಲೂಕಿನಲ್ಲಿ ಕುಂಟುತ್ತಾ ಸಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದೆರಡು ವಾರದಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಎತ್ತಂಗಡಿ ಅನಿವಾರ್ಯ:ನಿಮಗೆ ಪ್ರತ್ಯೇಕ ಇಲಾಖೆ ಇದ್ದೂ ಕೊಳವೆಬಾವಿ ತೆಗೆದು ವರ್ಷ ಕಳೆದಿದ್ದರೂ ಪೈಪ್ ಲೈನ್ ಕೆಲಸ ಪೂರ್ಣಗೊಳಿಸದೇ ಜನರಿಗೆ ನೀರು ಒದಗಿಸುತ್ತಿಲ್ಲ. ಈ ವರ್ಷ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ತಾಲೂಕು ಕೇಂದ್ರದಲ್ಲೇ ಮನೆ ಮಾಡಿಕೊಂಡು ಕೆಲಸ ಮಾಡದಿದ್ರೆ ನಿಮ್ಮನ್ನು ಎತ್ತಂಗಡಿ ಮಾಡುವುದು ಅನಿವಾರ್ಯ. ಈ ಸಭೆಗೆ ಸರಿಯಾದ ಮಾಹಿತಿಯನ್ನೂ ನೀಡಿಲ್ಲ. 10 ದಿನ ಬಿಟ್ಟು ಮತ್ತೆ ಈ ಬಗ್ಗೆಯೇ ಸಭೆ ಕರೀತೀನಿ ಎಂದೂ ಎಚ್ಚರಿಸಿದರು.
ಅರಳಸುರುಳಿ, ನೊಣಬೂರು ಕೋಣಂದೂರು ಮತ್ತು ಹಾದಿಗಲ್ಲು ಭಾಗದಲ್ಲಿ ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಇದೆ. ಅದರಲ್ಲೂ ಮುಖ್ಯವಾಗಿ ಅರಳಸುರುಳಿ ಮತ್ತು ನೊಣಬೂರು ಗ್ರಾಪಂ ವ್ಯಾಪ್ತಿಯ ತೆರೆದ ಬಾವಿಗಳ ನೀರಿನಲ್ಲೂ ಫ್ಲೋರೈಡ್ ಅಂಶ ಇರುವುದು ಆತಂಕಕಾರಿಯಾಗಿದೆ ಎಂದು ನೊಣಬೂರು ಗ್ರಾಪಂ ಪಿಡಿಓ ಸಭೆಯ ಗಮನಕ್ಕೆ ತಂದರು.ತಹಸೀಲ್ದಾರ್ ಜಕ್ಕಣ್ಣವರ್, ತಾಪಂ ಇಒ ಎಂ.ಶೈಲಾ, ಜೆಜೆಎಂ ಎಇಇ ಚಂದ್ರಶೇಖರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್, ಮೆಸ್ಕಾಂ ಎಇಇ ಪ್ರಶಾಂತ್, ಎಸಿಎಫ್ ಪ್ರಕಾಶ್, ಆರ್‌ಎಫ್‍ಒ ಲೋಕೇಶ್ ಮತ್ತು ಆದರ್ಶ್, ಸರ್ಕಾರಿ ಇಲಾಖೆ ಅಧಿಕಾರಿಗಳು ಇದ್ದರು.
- - - ಕೋಟ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಸವಾನಿ ಗ್ರಾಪಂ ಆಡಳಿತ ವಿರೋಧ ವ್ಯಕ್ತಪಡಿಸಿದೆ. ತಾಲೂಕಿಗೆ ಮಂಜೂರಾಗಿರುವ ಈ ಯೋಜನೆಯನ್ನೇ ವಿರೋಧಿಸುವುದರ ಹಿಂದಿನ ಉದ್ದೇಶವಾದರೂ ಏನು? ನೀರನ್ನು ಎಲ್ಲಿಂದ ತರ್ತೀರಿ ಎಂಬ ಬಗ್ಗೆ ಜನರಿಗೆ ಗ್ರಾ.ಪಂ.ಯವರೇ ಉತ್ತರ ಕೊಡಬೇಕು. ಕುಡಿಯುವ ನೀರಿಗೆ ಸಂಬಂಧಿಸಿ ಗ್ರಾಪಂ ಮಟ್ಟದಲ್ಲಿ ಪ್ರತ್ಯೇಕ ಸಭೆ ಕರೆಯುವುದು ಸೂಕ್ತ- ಆರಗ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ ಕ್ಷೇತ್ರ
- - - -28ಟಿಟಿಎಚ್01:ಕುಡಿಯುವ ನೀರಿನ ಬಗ್ಗೆ ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.