ಸಾರಾಂಶ
ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರ ವಹಿಸುವ ಜತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಲ್ಲಿ ಡೆಂಘೀ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮ ಪ್ರಸಾದ್ ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ನೈರ್ಮಲ್ಯ ಸಭೆ ಹಾಗೂ ಅರಿವಿನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೈರ್ಮಲ್ಯ ಸಭೆ
ಹೊಳೆನರಸೀಪುರ: ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರ ವಹಿಸುವ ಜತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಲ್ಲಿ ಡೆಂಘೀ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮ ಪ್ರಸಾದ್ ಸಲಹೆ ನೀಡಿದರು.ತಾಲೂಕಿನ ಪಡುವಲಹಿಪ್ಪೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಪಡುವಲಹಿಪ್ಪೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮೀಣ ನೈರ್ಮಲ್ಯ ಸಭೆ ಹಾಗೂ ಅರಿವಿನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಡೆಂಘೀ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ, ಚಿಕನ್‌ಗುನ್ಯ ರೋಗಗಳು ಸೊಳ್ಳೆಗಳಿಂದ ಬರುವ ಕಾಯಿಲೆಗಳಾಗಿವೆ. ಜ್ವರ ಬಂದ ತಕ್ಷಣ ವೈದ್ಯರನ್ನು ಸಂರ್ಪಕಿಸಿ, ಅಗತ್ಯ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಮಾರಣಾಂತಿಕ ಅಪಾಯವಾಗಲಿದೆ. ಆದ್ದರಿಂದ ರೋಗ ಬಂದು ಚಿಕಿತ್ಸೆ ಪಡೆದು ಗುಣಮುಖರಾಗುವುದು ಒಂದಡೆಯಾದರೆ ರೋಗವೇ ಬಾರದಂತೆ ಎಚ್ಚರ ವಹಿಸಿದಲ್ಲಿ ಎಲ್ಲರಿಗೂ ಒಳ್ಳೆಯದು ಜತೆಗೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಎಂದು ಹೇಳಿದರು.
ಪಿಡಿಒ ದೇವರಾಜು ಮಾತನಾಡಿ, ‘ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಆರೋಗ್ಯ ಇಲಾಖೆಯು ನೀಡುವ ಸಲಹೆಗಳನ್ನು ಪಾಲನೆ ಮಾಡುತ್ತ, ಭಿತ್ತಿಪತ್ರಗಳಲ್ಲಿ ನೀಡುವ ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ಅರ್ಥೈಸಿಕೊಂಡು ಜನರಲ್ಲಿ ಹೆಚ್ಚಿನ ಅರಿವನ್ನು ಮೂಡಿಸುವ ಕಾರ್ಯವನ್ನು ವಿದ್ಯಾವಂತರು ಮಾಡಿದಲ್ಲಿ ಸಾಂಕ್ರಮಿಕ ರೋಗ ಮುಕ್ತ ಗ್ರಾಮಸ್ಥರು ಎಂಬ ಹೆಗ್ಗಳಿಗೆ ನಮ್ಮದಾಗುತ್ತದೆ’ ಎಂದರು.ಗ್ರಾಪಂ ಅಧ್ಯಕ್ಷೆ ರಾಧಾ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಸದಸ್ಯ ವೆಂಕಟೇಶ್, ಅರೋಗ್ಯ ಸಂರಕ್ಷಣಾಧಿಕಾರಿ ಪಾರ್ವತಿ, ವಿದ್ಯಾಶ್ರೀ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.