ಸಾರಾಂಶ
- ತಾಪಂ, ನೀರಾವರಿ ಇಲಾಖೆಗೆ ಉಪ ಲೋಕಾಯುಕ್ತರ ಸೂಚನೆ । ಒತ್ತುವರಿ ತೆರವು ವೀಕ್ಷಣೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಸೂಳೆಕೆರೆಯ ಪ್ರದೇಶಕ್ಕೆ ಉಪ ಲೋಕಾಯುಕ್ತ ನ್ಯಾಯಾಧೀಶ ಬಿ.ವೀರಪ್ಪ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು. ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಒತ್ತುವರಿ ಮಾಡಿಕೊಂಡಿರುವ ಜಮೀನಿನ ಬಳಿಗೂ ತೆರಳಿ ಒತ್ತುವರಿಯಾದ ಜಾಗ ತೆರವುಗೊಳಿಸಿದ ಅಧಿಕಾರಿಗಳ ಕಾರ್ಯಾಚರಣೆಗೆ ಪ್ರಶಂಸೆಯನ್ನೂ ವ್ಯಕ್ತಪಡಿಸಿದರು. ಸೂಳೆಕೆರೆಯು 5447 ಎಕರೆ ಪ್ರದೇಶದಲ್ಲಿ ಇದೆ. ಇದರಲ್ಲಿ 247 ಎಕರೆ ಭೂ ಪ್ರದೇಶ ಒತ್ತುವರಿಯಾಗಿತ್ತು. ಉಪವಿಭಾಗಾಧಿಕಾರಿ ಅಭಿಷೇಕ್ ಮತ್ತು ಚನ್ನಗಿರಿಯ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರು ಕೆರೆಯ ಒತ್ತುವರಿ ಪ್ರದೇಶವನ್ನು ಅಳತೆ ಮಾಡಿಸಿ, ಬಾಂದ್ ಕಲ್ಲುಗಳನ್ನು ನೆಟ್ಟು ಸಂಬಂಧಪಟ್ಟ ಬೃಹತ್ ನೀರಾವರಿ ಇಲಾಖೆಗೆ ಮತ್ತು ಪಶು ಸಂಗೋಪನಾ ಇಲಾಖೆಗೆ ವಹಿಸಿ ಕೊಟ್ಟಿದ್ದರು. ಈ ಸ್ಥಳಕ್ಕೆ ಉಪ ಲೋಕಾಯುಕ್ತರು ಭೇಟಿ ನೀಡಿದರು.ಈ ಬೃಹತ್ ಕೆರೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿರುವುದು ಈ ಭಾಗದ ಜನರ ಸೌಭಾಗ್ಯ. ಇಂತಹ ಕೆರೆಯ ಸುತ್ತಮುತ್ತಲಿರುವ ಗ್ರಾಮಾಂತರ ಪ್ರದೇಶಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿದೆ ಎಂಬ ಮಾಹಿತಿ ಇದೆ. ಕೆರೆ ಕಲುಷಿತಗೊಳ್ಳದಂತೆ ಸಂರಕ್ಷಣೆ ಮಾಡಬೇಕು. ಈ ಜವಾಬ್ದಾರಿ ತಾಲೂಕು ಪಂಚಾಯಿತಿ ಮತ್ತು ನೀರಾವರಿ ಅಧಿಕಾರಿಗಳ ಮೇಲಿದೆ. ಈ ವಿಚಾರದ ಉಸ್ತುವಾರಿ ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ ಅವರ ಮೇಲಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚನೆ ನೀಡಿದರು.
ಸೂಳೆಕೆರೆಯ ದೋಣಿವಿಹಾರ ಕೇಂದ್ರಕ್ಕೂ ಉಪ ಲೋಕಾಯುಕ್ತರು ಭೇಟಿ ನೀಡಿದರು. ಅಲ್ಲಿಯ ಪ್ರದೇಶ ಗಮನಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅವರು ಈ ದೋಣಿ ವಿಹಾರ ಕೇಂದ್ರದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಸೂಳೆಕೆರೆ ಅಕ್ಕಪಕ್ಕದ ಗುಡ್ಡಗಳು ನೋಡಲು ಸುಂದರವಾಗಿವೆ. ಈ ಗುಡ್ಡದಲ್ಲಿ ಮರ-ಗಿಡಗಳನ್ನು ಬೆಳೆಸಿ ಹಸಿರು ವನವನ್ನಾಗಿ ಮಾಡಬೇಕು ಎಂದು ಡಿಎಫ್‌ಒ ರೆಡ್ಡಿ ಅವರಿಗೆ ಸೂಚನೆ ನೀಡಿದರು.ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಡಿಎಫ್‌ಒ ರೆಡ್ಡಿ, ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾಪಂ ಇಒ ಬಿ.ಕೆ.ಉತ್ತಮ್, ಕಂದಾಯ ಇಲಾಖೆ ಸೋಮಶೇಖರ್, ಜಿಲ್ಲಾಮಟ್ಟ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
- - --25ಕೆಸಿಎನ್‌ಜಿ2.ಜೆಪಿಜಿ:
ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.-25ಕೆಸಿಎನ್‌ಜಿ3: ಸೂಳೆಕೆರೆ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳ ಕಾರ್ಯವನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ಪ್ರಶಂಸಿಸಿದರು.