ಸಾರಾಂಶ
- ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ₹16.37 ಕೋಟಿ ಕಾಮಗಾರಿಗೆ ಚಾಲನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಅಧಿಕಾರಿಗಳು ಎಚ್ಚರ ವಹಿಸಿ, ನೀರಿನ ಬವಣೆ ಸೂಕ್ತವಾಗಿ ನೀಗಿಸಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ಕ್ಷೇತ್ರದ ವ್ಯಾಪ್ತಿಯ ತೋಳಹುಣಿಸೆ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 2021-22ನೇ ಸಾಲಿನ ಜೆಜೆಎಂ (ಬಹುಗ್ರಾಮ ಕುಡಿಯುವ ನೀರಿನ ಯೋಜನೆ) ಅಡಿ ಕುರ್ಕಿ ಮತ್ತು ಇತರೆ ಮೂರು ಗ್ರಾಮಗಳಿಗೆ ಡಿಬಿಒಟಿ ಆಧಾರದ ಮೇಲೆ ಕುಡಿಯುವ ನೀರು ಸರಬರಾಜು ಮಾಡುವ ₹16.37 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ತೋಳಹುಣಿಸೆ, ಕುರ್ಕಿ, ಪಾಮೇನಹಳ್ಳಿ, ಚಂದ್ರನಹಳ್ಳಿ, ಬುಳ್ಳಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಈ ಹಿಂದೆ ಮಾಯಕೊಂಡದಲ್ಲಿ ಕೈಗೊಂಡಿದ್ದ ಇದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಕಂದಗಲ್ಲು ಸೇರಿದಂತೆ ಇತರೆ ಹಳ್ಳಿಗಳಿಗೆ ನೀರು ತಲುಪದೇ ಯೋಜನೆ ವಿಫಲವಾಗಿದೆ. ಈಗ ತೋಳಹುಣಿಸೆಯಲ್ಲಿ ₹16.37 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಯೋಜನೆ ವಿಫಲ ಆಗದಂತೆ ಎಚ್ಚರ ವಹಿಸಬೇಕು. ಗುತ್ತಿಗೆದಾರರು ಮತ್ತು ಎಂಜಿನಿಯರ್ ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು. ಗ್ರಾಮಸ್ಥರು ಕೂಡ ನಿಗಾ ವಹಿಸಬೇಕು ಎಂದು ಸೂಚಿಸಿದರು.ಅನುದಾನ ಪೋಲಾಗದಿರಲಿ:
ಸರ್ಕಾರದ ಯೋಜನೆಗಳು ವೈಫಲ್ಯಗಳಾಗಬಾರದು. ಅವು ಜನರಿಗೆ ಸಂಪೂರ್ಣ ತಲುಪಿದಾಗ ಮಾತ್ರ ಸರ್ಕಾರದ ಹಣ ಪೋಲಾಗದಂತೆ ಆಗುತ್ತದೆ. ಈ ಹಿಂದೆ ಕ್ಷೇತ್ರದಲ್ಲಿ ಕೈಗೊಂಡಿದ್ದ ಕೋಟ್ಯಂತರ ರೂ. ವೆಚ್ಚದ 22 ಕೆರೆಗಳ ಏತನೀರಾವರಿ ಯೋಜನೆ ವಿಫಲವಾಗಿ ಸರ್ಕಾರದ ಹಣ ಪೋಲಾಯಿತು. ಈ ರೀತಿ ಆಗಬಾರದು. ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂದು ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಸಲಹೆ ನೀಡಿದರು.ತೋಳಹುಣಿಸೆ ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಂಜಪ್ಪ, ಪಿಡಿಒ ಗೀತಾ, ಕುರ್ಕಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಪಿಡಿಒ ಸುರೇಖಾ, ಮಾಜಿ ಅಧ್ಯಕ್ಷರಾದ ತಾವರಿಬಾಯಿ ಲೋಕ್ಯನಾಯ್ಕ, ವೀರೇಂದ್ರ ಪಾಟೀಲ್, ಗ್ರಾಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಲೋಹಿತ್, ಎಂಜಿನಿಯರ್ ರಾಜೀವ್, ಗ್ರಾಮದ ಮುಖಂಡರಾದ ಶೇಖರಪ್ಪ, ಅಶೋಕ್, ಓಂಕಾರಪ್ಪ, ಜಯ್ಯಪ್ಪ, ಮಾಯಪ್ಪ, ವೆಂಕಟೇಶ್, ದ್ಯಾಮನಾಯ್ಕ್ ಉಪಸ್ಥಿತರಿದ್ದರು.
- - -ಕೋಟ್ ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಇದೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ಮುಖ್ಯಮಂತ್ರಿ ಹೆಚ್ಚಿನ ಅನುದಾನದ ಭರವಸೆ ನೀಡಿದ್ದಾರೆ. ರಸ್ತೆಗಳ ಅಭಿವೃದ್ಧಿ ಮೊದಲ ಆದ್ಯತೆಯಾಗಿದೆ. ಮೂಲ ಸೌಕರ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗುವುದು
- ಕೆ.ಎಸ್. ಬಸವಂತಪ್ಪ, ಶಾಸಕ- - -
-24ಕೆಡಿವಿಜಿ 31, 32:ದಾವಣಗೆರೆ ತಾಲೂಕಿನ ತೋಳಹುಣಿಸೆ ಗ್ರಾಮದಲ್ಲಿ ₹16.37 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.