ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳಲ್ಲಿ ನೀರು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಪನ್ಮೂಲವು ನಶಿಸದಂತೆ ಹಾಗೂ ಮಲಿನಗೊಳ್ಳದಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಹೇಳಿದರು ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಪ್ರಾಣಿ ಸಂಕುಲಕ್ಕೆ ಆಹಾರ ಇಲ್ಲದೇ ಕೆಲವು ಸಮಯ ಬದುಕಬಹುದು. ಆದರೆ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಜಲರೂಪದಲ್ಲಿರುವ ಅಮೂಲ್ಯವಾದ ಈ ಬಂಗಾರವನ್ನು ನಾವು ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಅದೇ ಪರಿಶುದ್ಧವಾದ ಜಲವನ್ನು ಕಾಣಿಕೆಯಾಗಿ ನೀಡಬೇಕಾಗಿದೆ. ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ತಾವೆಲ್ಲರೂ ಬುದ್ಧಿವಂತಿಕೆಯಿಂದ ನೀರನ್ನು ಬಳಸಬೇಕು ಹಾಗೂ ಜಾಗೃತಿಯನ್ನು ಉಂಟು ಮಾಡಬೇಕು. ಅಂದಾಗ ಮಾತ್ರ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ನೀರನ್ನು ಹಿತಮಿತವಾಗಿ ಬಳಸಿ ಅದನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಡಾ.ವೈ.ಬಿ.ನಾಯಕ್ ಹಾಗೂ ಪ್ರೊ.ದಿಲೀಪಕುಮಾರ್ ಅವರು ನೀರಿನ ಸಂರಕ್ಷಣೆ ಹಾಗೂ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ಪ್ರೊ.ಸಿ.ಪಿ.ದಡೆಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಬಿ.ಎಂ.ಸಾಲವಾಡಗಿ, ಆರ್.ಎನ್.ರಾಥೋಡ್, ಆರ್.ಎಂ.ಮುಜಾವರ, ವಿ.ಎನ್.ರಜಪೂತ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ಪ್ರೊ.ಎಂ.ಕೆ.ಯಾದವ ನಿರೂಪಿಸಿ, ವಂದಿಸಿದರು.