ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡ, ಮರ ನಡೆವುದಲ್ಲ. ಭೂಮಿಯಲ್ಲಿ ಕೊಳೆಯದ ತ್ಯಾಜ್ಯಗಳು ಭೂತಾಯಿಯ ಒಡಲು ಸೇರದಂತೆ ಮತ್ತು ಗಾಳಿ, ನೀರು, ಮಣ್ಣು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಪವಿತ್ರ ಹೇಳಿದರು.ನಗರದ ಕೆಎಸ್‌ಆರ್‌ಟಿಸಿ ಕಾರ್ಯಾಗಾರ ಘಟಕ-2 ರಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದನ್ನು ಪರಿಸರಕ್ಕೆ ಹಾನಿಯಾಗದ ರೀತಿ ವಿಂಗಡಿಸುವ ಕೆಲಸ ಆಗಬೇಕು. ಇದರ ಸೂಕ್ತ ನಿರ್ವಹಣೆಯಿಂದ ಪರಿಸರಕ್ಕೆ ಹೆಚ್ಚು ಕೊಡುಗೆ ನೀಡಬಹುದು ಎಂದರು.ಪ್ರವಚನಕಾರ ಮುರುಳೀಕೃಷ್ಣ ಮಾತನಾಡಿ, ಮನುಷ್ಯರು ಪರಿಸರದ ಮೇಲೆ ಅಗಾಧ ದುಷ್ಪರಿಣಾಮಗಳನ್ನು ಉಂಟು ಮಾಡಿದ್ದಾರೆ. ಇದರ ಪರಿಣಾಮ ರಾಷ್ಟ್ರದ ಪ್ರಮುಖ ನಗರಗಳಲ್ಲಿ 50 ಡಿಗ್ರಿ ಉಷ್ಣಾಂಶ ಉಂಟಾಗಿದೆ. ಅತಿಯಾದ ಕೈಗಾರಿಕೆ ಮತ್ತು ಗಣಿಗಾರಿಕೆಯಿಂದ ಪರಿಸರ ದಿನದಿಂದ ದಿನಕ್ಕೆ ಹೆಚ್ಚು ಮಲೀನವಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರ ಮುಂದಾಗಬೇಕು. ಇದರ ಜೊತೆಗೆ ಜನರು ಮರ, ಗಿಡಗಳನ್ನು ಹೊಸದಾಗಿ ಹಾಕದಿದ್ದರೂ ಚಿಂತೆಯಿಲ್ಲ. ಇರುವ ಮರಗಳಿಗೆ ಕೊಡಲಿ ಪೆಟ್ಟು ನೀಡದಂತೆ ಎಚ್ಚರಿಕೆ ವಹಿಸಿದರೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು.ನಿವೃತ್ತ ಪ್ರಾದ್ಯಾಪಕ ಪ್ರೊ.ಸಿದ್ದೇಶಗೌಡ ಮಾತನಾಡಿ, ಜೀವ ಸಂಕುಲದ ಒಳಿತಿಗಾಗಿ, ಒಳ್ಳೆಯ ಪರಿಸರಕ್ಕಾಗಿ ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ಐಷರಾಮಿ ಜೀವನ ತ್ಯಜಿಸಿ ಸಾರ್ವಜನಿಕ ಸಾರಿಗೆ ಬಳಸಿ, ಪರಿಸರ ಮಾಲಿನ್ಯ ತೆಡಯುವ ಕೆಲಸ ಆಗಬೇಕಿದೆ ಎಂದರು.ಕೆಎಸ್‌ಆರ್‌ಟಿಸಿ ಕಾರ್ಯಾಗಾರದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಪರಿಸರ ನಮ್ಮನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದೆ. ಹಾಗಾಗಿ ನಾವು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಳುವಳಿಯಾಗಿ ನೀಡಬೇಕಾಗಿದೆ. ನಮ್ಮ ನಿಗಮವೂ ಸಹ ಕಡಿಮೆ ಹೊಗೆ ಉಗುಳುವ ವಾಹನಗಳನ್ನು ಓಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಅಲ್ಲದೆ ನಿಗಮದ ಖಾಲಿ ಜಾಗಗಳಲ್ಲಿ ಮರಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ನಿಗಮದ ಕನ್ನಡ ಕ್ರಿಯಾ ಸಮಿತಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ನಿಗಮವೂ ಕೂಡ ಬಿ.ಎಸ್.೬ ಬಸ್‌ಗಳನ್ನು ಹೆಚ್ಚಾಗಿ ಓಡಿಸುತ್ತಿದ್ದು, ಇವು ಕಡಿಮೆ ಹೊಗೆ ಸೂಸುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಅಲ್ಲದೆ ಜಲಮೂಲಗಳನ್ನು ರಕ್ಷಿಸುವತ್ತ ಯುವಜನರು ಹೆಚ್ಚು ಒತ್ತು ನೀಡುವಂತೆ ಪ್ರೇರೆಪಿಸಬೇಕಿದೆ ಎಂದರು.ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ ಮಾತನಾಡಿ, ನಮ್ಮ ಡಿಪೋ ಆರಂಭಗೊಂಡು ೨೫ ವರ್ಷಗಳಾಗಿದ್ದು, ಅಂದಿನಿಂದ ಕನ್ನಡ ಕ್ರಿಯಾ ಸಮಿತಿ ಹುಟ್ಟಿಕೊಂಡಿದೆ. ನಾಡು, ನುಡಿ, ನೆಲ, ಜಲ, ಪರಿಸರದ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಜಾಗೃತಿ ಜಾಥಾದಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಾಣಿ, ಪಕ್ಷಿ, ಮಾನವರಿಗೆ ಅನುಕೂಲವಾಗುಂತಹ ಮರ, ಗಿಡಗಳನ್ನು ನೆಟ್ಟು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಗುರಿ ನಮ್ಮದಾಗಿದೆ ಎಂದು ಹೇಳಿದರು.ಸಾಹಿತಿಗಳಾದ ಬಾಪೂಜ, ಮಹದೇವಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಉಪಾಧ್ಯಕ್ಷ ಮಂಜುನಾಥ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಆಸೀಫ್‌ವುಲ್ಲಾ , ಬಿಟಿಒ ಬಸವರಾಜು, ಆಡಳಿತಾಧಿಕಾರಿ ಬಸವರಾಜು, ಹೊನ್ನಮ್ಮ ಉಪಸ್ಥಿತರಿದ್ದರು.