ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ನಾನು ಸರ್ಕಾರಕ್ಕೆ ಮನವಿ ನೀಡಿದ್ದೇನೆ. ನಗರಸಭೆಯಿಂದಲೂ ಸದಸ್ಯರೆಲ್ಲಾ ಸೇರಿ ಒಂದು ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.ಅವರು ನಗರಸಭೆಯ ಸಭಾಂಗಣದಲ್ಲಿ ನಡೆದ ವಿಶೇಷ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಅವರು ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಶಿರಾವನ್ನು ಜಿಲ್ಲಾ ಕೇಂದ್ರವ ನ್ನಾಗಿ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ತರಬೇಕಿತ್ತು ಎಂದು ಪ್ರಶ್ನಿಸಿದಾಗ ಈ ಬಗ್ಗೆ ನಾನು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆಸಿದ್ದೇನೆ ಎಂದರು.
ಎಚ್ಚರಿಕೆಯಿಂದ ನೀರು ಬಳಸಿ:ಶಿರಾ ನಗರದಲ್ಲಿ ಸುಮಾರು ೯೮ ಸಾವಿರ ಜನಸಂಖ್ಯೆ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಕೆರೆಯಲ್ಲಿ ನೀರಿರುವ ಕಾರಣ ಸಮಸ್ಯೆ ಉದ್ಭವವಾಗಿಲ್ಲ. ದೊಡ್ಡ ಕೆರೆಯಲ್ಲಿ ನೀರು ಖಾಲಿಯಾದರೆ ನೀರಿನ ಸಮಸ್ಯೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿ ಗಳೂ ಕುಡಿಯುವ ನೀರಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮುಂಬರುವ ನಾಲ್ಕು ತಿಂಗಳು ಕಾಲ ಮಳೆ ಬರುವ ಸಾಧ್ಯತೆ ಕಡಿಮೆ ಇದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ನೀರನ್ನು ವ್ಯರ್ಥ ಮಾಡದೆ ಉಪಯೋ ಗಿಸಬೇಕಿದೆ. ಎಲ್ಲಿಯೂ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದರು.
ಸಂತೆಯ ಹರಾಜು ಮರು ಟೆಂಡರ್:ವಾರದ ಸಂತೆಯ ನೆಲವಳಿ ಸುಂಕ ವಸೂಲಾತಿಗೆ ಸಂಬಂಧಿಸಿದಂತೆ ಕೇವಲ ೨೪ ಸಾವಿರಗಳಿಗೆ ಹರಾಜು ಕೂಗಲಾಗಿದ್ದು, ಇದರಿಂದ ನಗರಸಭೆಗೆ ನಷ್ಟ ಉಂಟಾಗುತ್ತದೆ. ಆದ್ದರಿಂದ ವಾರದ ಸಂತೆಯ ನೆಲವಳಿಯನ್ನು ಮರು ಹರಾಜು ಮಾಡಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿ ಎಂದು ನಗರಸಭೆಯ ಸದಸ್ಯರಾದ ಎಸ್.ಎಲ್.ರಂಗನಾಥ್, ಆರ್.ರಾಮು, ಬಿ.ಅಂಜಿನಪ್ಪ ಒತ್ತಾಯಿಸಿ ದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಮರು ಹರಾಜು ಮಾಡುವುದಾಗಿ ತಿಳಿಸಿದರು. ರಸ್ತೆಗೆ ಬೊಮ್ಮೇಗೌಡರ ಹೆಸರಿಡಿ:
ನಗರಸಭೆಯ ವ್ಯಾಪ್ತಿಯಲ್ಲಿರುವ ಬೊಮ್ಮೇಗೌಡರ ಸ್ಥಳದಲ್ಲಿ ಸುಮಾರು ೪೦ ವರ್ಷಗಳಿಂದ ಯಾವುದೇ ಶುಲ್ಕವಿಲ್ಲದೆ ಉಚಿತ ವಾಗಿ ವಾರದ ಸಂತೆ ಮಾಡಲು ಸ್ಥಳಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಅವರ ಸೇವೆಯ ನೆನಪಿಗಾಗಿ ಬೊಮ್ಮೇಗೌಡರ ಹೆಸರನ್ನು ನಗರದ ಯಾವುದಾದರೂ ಒಂದು ರಸ್ತೆಗೆ ನಾಮಕರಣ ಮಾಡಿ ಹಾಗೂ ಅವರ ಕುಟುಂಬದವರಿಗೆ ನಾಗರಿಕ ಸನ್ಮಾನ ಮಾಡಿ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಒಳಚರಂಡಿ ನಿರ್ವಹಣೆ ಬೋರ್ಡ್‌ಗೆ ನೀಡಿ:ಶಿರಾ ನಗರದಲ್ಲಿ ಜನರ ಅನುಕೂಲಕ್ಕಾಗಿ ಕೋಟ್ಯಂತರ ರು. ವೆಚ್ಚದಲ್ಲಿ ಮಾಡಿರುವ ಒಳಚರಂಡಿ ಸಂಪರ್ಕಗಳನ್ನು ಇದುವರೆಗೆ ಸುಮಾರು ೧೬ ಸಾವಿರಕ್ಕಿಂತ ಹೆಚ್ಚು ಮನೆಗಳಿಗೆ ನೀಡಬೇಕಿತ್ತು. ಆದರೆ ಕೇವಲ ೧೦೦೦ ಮನೆಗಳಿಗೆ ಮಾತ್ರ ಸಂಪರ್ಕ ನೀಡಲಾಗಿದೆ. ಯುಜಿಡಿ ಕಾಮಗಾರಿ ಜನರಿಗೆ ಅನುಕೂಲವಾಗಿಲ್ಲ. ನಗರಸಭೆಯಿಂದ ಸಮರ್ಪಕ ನಿರ್ವಹಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಯುಜಿಡಿ ನಿರ್ವಹಣೆ ಒಳಚರಂಡಿ ಮಂಡಳಿಗೆ ವಹಿಸಿ ಎಂದು ಸದಸ್ಯ ಆರ್.ರಾಮು ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು. ವಿದ್ಯುತ್‌ಗೆ ೧೭.೫೦ ಕೋಟಿ: ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಹೆಚ್ಚುವುದರಿಂದ ನಗರದ ಉಷ್ಣಾಂಶ ಹೆಚ್ಚುತ್ತದೆ. ನಗರದಲ್ಲಿ ಮರಗಳ ಕೊಂಬೆಗಳು ವಿದ್ಯುತ್ ಲೈನ್‌ಗೆ ತಾಕುವುದರಿಂದ ಕಡಿಯಲಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಗರದ ಎಲ್ಲಾ ವಿದ್ಯುತ್ ಲೈನ್ಗಳನ್ನು ಕೇಬಲ್ ಮೂಲಕ ಅಳವಡಿಸಲು ಸುಮಾರು ೧೭.೫೦ ಕೋಟಿ ರು. ವೆಚ್ಚದಲ್ಲಿ ಅನುಮೋದನೆಯಾಗಿದ್ದು ರಾಜ್ಯದಲ್ಲಿ ಯೇ ಶಿರಾ ನಗರಕ್ಕೆ ಮಾತ್ರ ಈ ಯೋಜನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಪೌರಾಯುಕ್ತ ರುದ್ರೇಶ್ ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.