ನೀರು ಪೋಲಾಗದಂತೆ ಎಚ್ಚರ ವಹಿಸಿ: ಸೋನಾಲಿ ಕ್ಷೀರಸಾಗರ್

| Published : May 09 2025, 12:31 AM IST

ಸಾರಾಂಶ

ಈ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಿಂದ ಸ್ವ- ಸಹಾಯ ಸಂಘದ ಇಬ್ಬರು ಅಭ್ಯರ್ಥಿಗಳಂತೆ ಅಲ್ಪಾವಧಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಹಾವೇರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಳದ ನೀರು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಬೇಕು ಹಾಗೂ ನೀರು ಪೋಲಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸೋನಾಲಿ ಕ್ಷೀರಸಾಗರ್ ತಿಳಿಸಿದರು.

ಹಾನಗಲ್ಲ ಜಿಟಿಟಿಸಿಯಲ್ಲಿ ಜರುಗಿದ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯ ಸಚಿವಾಲಯದ ಜಲಜೀವನ ಮಿಷನ್ ಅಡಿ ನಲ್‌ ಜಲ್ ಮಿತ್ರ ಯೋಜನೆ ಜಾರಿ ತರಲಾಗಿದೆ ಎಂದರು.

ಈ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಿಂದ ಸ್ವ- ಸಹಾಯ ಸಂಘದ ಇಬ್ಬರು ಅಭ್ಯರ್ಥಿಗಳಂತೆ ಅಲ್ಪಾವಧಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾನಗಲ್ಲ ಜಿಟಿಟಿಸಿ ಪ್ರಾಂಶುಪಾಲ ಗೋಪಾಲ ಎಸ್. ಬೊಮ್ಮಗಟ್ಟಿ ಮಾತನಾಡಿ, ಈ ಯೋಜನೆಯ ಕುರಿತು ಸಾರ್ವಜನಿಕರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಹಾಗೂ ನೀರು ಅನಾವಶ್ಯಕವಾಗಿ ಪೋಲಾಗದಂತೆ ತಡೆಗಟ್ಟಲು ಮುಂಜಾಗ್ರತೆ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಪ್ರೇಮಾ ಸಿಂಗಾಪುರ, ಜಿಪಂ ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ನಾಗರಾಜ ಬಾರ್ಕಿ, ಜಿಲ್ಲಾ ಸಂಯೋಜಕ ರಮೇಶ ದಾಸರ ಇತರರು ಭಾಗವಹಿಸಿದ್ದರು.ಭಯೋತ್ಪಾದಕ ನೆಲೆ ನಾಶ: ಡಿವೈಎಫ್ಐ ಸ್ವಾಗತ

ಹಾವೇರಿ: ಆಪರೇಷನ್ ಸಿಂಧೂರ ಹೆಸರಿನಡಿ ಭಯೋತ್ಪಾದನೆಯ ವಿರುದ್ಧ ಸದೃಢ ನಿಲುವು ತೆಗೆದುಕೊಂಡು ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿಗೈದ ಭಾರತೀಯ ಸೇನೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ರಾಜ್ಯ ಸಮಿತಿಯ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿನಂದಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದದ್ದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಲಷ್ಕರ್- ಎ- ತೈಬಾ. ಈ ಘೋರ ಕೃತ್ಯದ ನಂತರ ದೇಶದ ಜನತೆ ಭಯೋತ್ಪಾದನೆಯ ವಿರುದ್ಧ ಬಲವಾಗಿ ಪ್ರತಿರೋಧಿಸಿತು. ಡಿವೈಎಫ್‌ಐ ಸಂಘಟನೆಯು ಭಯೋತ್ಪಾದನೆಯ ವಿರುದ್ಧ ದೃಢ ನಿಲುವು ತೆಗೆದುಕೊಂಡು ಪ್ರತಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವು ಸರ್ಕಾರದ ಕ್ರಮಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದವು. ಇದು ಭಯೋತ್ಪಾದನೆಯ ವಿರುದ್ಧ ದೇಶದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯೊಳಗಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯು ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ. ಅವರ ಶೌರ್ಯ ಮತ್ತು ಅಚಲ ಬದ್ಧತೆಯು ರಾಷ್ಟ್ರದ ಹೆಮ್ಮೆಯಾಗಿದೆ ಎಂದು ತಿಳಿಸಿದ್ದಾರೆ.