ಹಾಸನ: ಪ್ರಧಾನಿ ಮೋದಿ ಅವರ ಭಾಷಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವ ವಿಚಾರಕ್ಕೂ ದೇವೇಗೌಡರು ತೀವ್ರ ಪ್ರತಿಕ್ರಿಯೆ ನೀಡಿದ್ದು, ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವೆ ನಲವತ್ತು ದಿನಗಳ ಕಾಲ ನಡೆದ ಯುದ್ಧದ ಪರಿಣಾಮ ಇಡೀ ವಿಶ್ವದ ಮೇಲೆ ಉಂಟಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ನಮ್ಮ ಹಡಗು ಮುಳುಗಿದ ಘಟನೆಗಳೂ ನಡೆದಿವೆ. ಇಂತಹ ಜಾಗತಿಕ ಮಟ್ಟದ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಇದು ಸಾಮಾನ್ಯ ಪರಿಸ್ಥಿತಿ ಅಲ್ಲ. ಹಿಂದೆಂದೂ ಕಾಣದ ರೀತಿಯ ಯುದ್ಧ ನಡೆದಿದೆ. ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನರಿಗೆ ಪೆಟ್ರೋಲ್, ಡೀಸೆಲ್ ಬಳಕೆ ಹಾಗೂ ಚಿನ್ನ ಖರೀದಿಯಲ್ಲಿ ಮಿತವ್ಯಯ ಪಾಲಿಸುವಂತೆ ಮನವಿ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಆಗಿರುವ ಬದಲಾವಣೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಉಂಟಾಗಿರುವ ಪರಿಣಾಮವನ್ನು ನಿಬಾಯಿಸುವ ದೃಷ್ಟಿಯಿಂದ ಮೋದಿ ಹಾಗೆ ಹೇಳಿದ್ದಾರೆ ಎಂದರು.ಸಿದ್ದರಾಮಯ್ಯಗೆ ಇತಿಹಾಸ ನೆನಪಿಸಿಕೊಟ್ಟ ದೇವೇಗೌಡರು

ಭಾರತ-ಬಾಂಗ್ಲಾ ಯುದ್ಧದ ಬಳಿಕ ನಮ್ಮ ದೇಶದಲ್ಲಿ ಬೆಲೆ ಏರಿಕೆ ಉಂಟಾಗಿತ್ತು. ಆಗ ಪ್ರಧಾನಿ ಇಂದಿರಾ ಗಾಂಧಿಯವರು ರಾಮಲೀಲಾ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವಾಗ ಸಕ್ಕರೆ, ಸೀಮೆಎಣ್ಣೆ ಬೆಲೆ ಹೆಚ್ಚಾಗಿದೆ. ಹಾಗಾಗಿ ಜನರು ವಾರದಲ್ಲಿ ಒಂದು ದಿನ ಟೀ ಕುಡಿಯುವುದನ್ನು ಬಿಡಿ, ಒಂದು ಹೊತ್ತು ಊಟ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು ಎಂದು ಹೇಳುವ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಇತಿಹಾಸವನ್ನು ನೆನಪಿಸಿದರು. ಆಗಲೂ ದೇಶ ಸಂಕಷ್ಟ ಎದುರಿಸಿತ್ತು. ಜಾಗತಿಕ ಸಮಸ್ಯೆಯಿಂದಾಗಿ ಇಂದೂ ಕೂಡ ಅದೇ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಅವರ ಅನುಭವದ ಬಗ್ಗೆ ನನಗೆ ಗೌರವ ಇದೆ ಎನ್ನುತ್ತಾ.. ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಹದಿನಾರು ಬಜೆಟ್ ಮಂಡಿಸಿದ್ದೀರಿ. ನೀವು ಬಹಳ ಅನುಭವಸ್ಥರು. ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಮಾತನಾಡಿದರೆ ಆ ಹುದ್ದೆಯ ಗೌರವ ಉಳಿಯುತ್ತದೆ ಎಂದು ಸಲಹೆ ನೀಡಿದರು.ದೇಶದ ೧೪೫ ಕೋಟಿ ಜನರಲ್ಲಿ ಪ್ರಧಾನಿಯಾಗುವ ಶಕ್ತಿ ಒಬ್ಬರಲ್ಲಿ ಇರಬೇಕು. ಮೋದಿ ಅವರು ರಾಷ್ಟ್ರದಲ್ಲೂ, ವಿಶ್ವ ಮಟ್ಟದಲ್ಲೂ ನಾಯಕನಾಗಿ ಬೆಳೆದಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡಿದರೆ ಏನೂ ಆಗುವುದಿಲ್ಲ ಎಂದು ಹೇಳಿದರು.ತಮ್ಮ ರಾಜಕೀಯ ಅನುಭವವನ್ನು ಉಲ್ಲೇಖಿಸಿದ ದೇವೇಗೌಡರು ನನಗೆ ೬೫ ವರ್ಷದ ರಾಜಕೀಯ ಅನುಭವ ಇದೆ. ಆ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಪ್ರಧಾನಿ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡುವುದು ಉತ್ತಮ” ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಾಕೀತು ಮಾಡಿದರು. ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾದರೂ ದೇಶದ ಪ್ರಧಾನಮಂತ್ರಿ ಹುದ್ದೆಯ ಗೌರವ ಕಾಪಾಡಬೇಕು ಎಂದು ದೇವೇಗೌಡರು ಅಭಿಪ್ರಾಯಪಟ್ಟರು.