ಸಾರಾಂಶ
- ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಪದ್ಮಶ್ರೀ ಗುಂಜಿಕರ್ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ತಂತ್ರಜ್ಞಾನವು ನಮ್ಮ ಜೀವನ ಸುಧಾರಣೆಗೆ, ಜ್ಞಾನಾರ್ಜನೆಗೆ ಸದ್ಬಳಕೆ ಆಗಬೇಕೇ ಹೊರತು, ಅದೇ ನಮಗೆ ಮಾರಕ ಆಗಬಾರದು. ಅದೇ ರೀತಿ ಸೋಷಿಯಲ್ ಮೀಡಿಯಾ ಬಳಸುವಾಗ ಸದಾ ಜಾಗೃತರಾಗಿ ಇರಬೇಕು ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ಉಪ ಅಧೀಕ್ಷಕಿ ಪದ್ಮಶ್ರೀ ಗುಂಜಿಕರ್ ಹೇಳಿದರು.ನಗರದ ರೋಟರಿ ಕ್ಲಬ್ ನೂತನ ಸಭಾಂಗಣದಲ್ಲಿ ಶುಕ್ರವಾರ ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆಯ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಅವರು ಮಾತನಾಡಿದರು.
ಸೋಷಿಯಲ್ ಮೀಡಿಯಾಗಳಿಂದ ಎಷ್ಟು ಅನುಕೂಲ ಇದೆಯೋ, ಅದಕ್ಕೂ ಹೆಚ್ಚು ಅಪಾಯವೂ ಇದೆ. ವೈಯಕ್ತಿಕ ಮಾಹಿತಿ, ಫೋಟೋ, ವೀಡಿಯೋಗಳನ್ನು ಎಲ್ಲಿ ಬೇಕಾದಲ್ಲಿ, ಯಾರೊಂದಿಗಾದರೂ ಹಂಚಿಕೊಳ್ಳಬಾರದು. ವೈಯಕ್ತಿಕ ಮಾಹಿತಿ ರಕ್ಷಣೆಗೆ ಕಡೆ ಗಮನವಿರಬೇಕು. ನಿಮ್ಮ ಆನ್ ಲೈನ್ ಬ್ಯಾಂಕ್, ಎಟಿಎಂ ಕಾರ್ಡ್, ಮೊಬೈಲ್, ಫೇಸ್ ಬುಕ್ ಹೀಗೆ ಸೋಷಿಯಲ್ ಮೀಡಿಯಾಗಳಿಗೆ ಕಠಿಣವಾದ, ಸುಲಭವಾಗಿ ಯಾರೂ ಬೇಧಿಸಲಾಗದ ಪಾಸ್ ವರ್ಡ್ ಕೊಡುವುದು ಸೂಕ್ತ. ಯಾರೇ ಬ್ಯಾಂಕ್, ಕಚೇರಿ, ಪರಿಚಯಸ್ಥರೆಂದು ಕರೆ ಮಾಡಿ, ನಿಮ್ಮ ಒಟಿಪಿ ನಂಬರ್, ಬ್ಯಾಂಕ್ ಅಕೌಂಟ್ ಮಾಹಿತಿ ಕೇಳಿದರೆ ಹಂಚಿಕೊಳ್ಳಬಾರದು ಬೇಕು ಎಚ್ಚರಿಸಿದರು.ಸೈಬರ್ ಅಪರಾಧ ಎಂಬುದು ಇಂದು ಇಡೀ ವಿಶ್ವವನ್ನೇ ಕಾಡುತ್ತಿರುವ ದೊಡ್ಡ ಸವಾಲು, ಸಮಸ್ಯೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಸೈಬರ್ ಅಪಾಯಗಳು, ಸೈಬರ್ ವಂಚಕರು, ಸೈಬರ್ ಕಳ್ಳತನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ. ವಿದ್ಯಾರ್ಥಿ, ಯುವ ಜನರು ಸಹ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಇತರರಿಗೂ ಜಾಗೃತಿ ಮೂಡಿಸುವ ಮೂಲಕ ಅಮಾಯಕರು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ಹಾಗೂ ವರದಿಗಾರರ ಕೂಟ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ಮನೆಗಳ್ಳತನ, ಸರಗಳ್ಳತನ, ಕನ್ನಡ, ದರೋಡೆ, ಸುಲಿಗೆ, ಡಕಾಯಿತಿ ಇದೆಲ್ಲಾ ಈಗ ಹಳತಾಗಿದೆ. ಈಗ ವಿದ್ಯಾವಂತರು, ತಂತ್ರಜ್ಞಾನದ ಬಗ್ಗೆ ಸಾಕಷ್ಟು ಅರಿವಿರುವ ವಿದ್ಯಾವಂತರೇ ಸೈಬರ್ ಅಪರಾಧ ಎಸಗುತ್ತಿದ್ದಾರೆ. ಇಂತಹ ಆನ್ ಲೈನ್ ವಂಚಕರು, ಸೈಬರ್ ಅಪರಾಧಿಗಳ ಕೃತ್ಯಕ್ಕೆ ಪ್ರಭಾವಿಗಳು, ಉದ್ಯಮಿಗಳು, ಶ್ರೀಮಂತರು, ಅಧಿಕಾರಿಗಳು, ವಿದ್ವಾಂಸರು, ಪ್ರಾಧ್ಯಾಪಕರು, ಮಹಿಳೆಯರು ಬಲಿಯಾಗುತ್ತಿದ್ದಾರೆ ಎಂದರು.ಸೋಷಿಯಲ್ ಮೀಡಿಯಾಗಳ ಅತಿ ಬಳಕೆಗಿಂತ ಪುಸ್ತಕ ಓದುವ, ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸಿ, ಜೀವನದ ಗುರಿ ಸಾಧಿಸುವತ್ತ ನಿಮ್ಮ ದೃಷ್ಟಿ ಇರಲಿ. ಅತಿಯಾದ ಮೊಬೈಲ್ ಬಳಕೆ ಅಪಾಯಕಾರಿ. ಅತಿಯಾದರೆ, ಅಮೃತವೂ ವಿಷವೆಂಬ ಅರಿವು ಇರಲಿ. ನಿಮ್ಮ ತಂದೆ, ತಾಯಿ ಸಾಕಷ್ಟು ನಿರೀಕ್ಷೆಯೊಂದಿಗೆ ನಿಮ್ಮನ್ನು ಓದಲು ಕಳಿಸಿರುತ್ತಾರೆ. ನಿಮ್ಮ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಅಂತಹ ನಂಬಿಕೆ, ವಿಶ್ವಾಸ, ಕನಸಿಗೆ ಚ್ಯುತಿ ಯಾಗದಿರಲಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಈ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ತಬಸುಮ್, ಭೂಮಿಕಾ, ಕೀರ್ತಿ ಕಾರ್ಯಕ್ರಮ ನಡೆಸಿಕೊಟ್ಟರು.- - -
ಕೋಟ್ ಕಾನೂನಾತ್ಮಕ ಮತ್ತು ವಿಶ್ವಾಸಾರ್ಹ ಪ್ಲಾಟ್ ಫಾರಂಗಳಲ್ಲಿ ಮಾತ್ರವೇ ಡಿಜಿಟಲ್ ಕ್ರಿಯೆ ಮಾಡಬೇಕು. ಅಧಿಕೃತ ವೆಬ್‌ಸೈಟ್‌ಗಳನ್ನಷ್ಟೇ ಬಳಸಬೇಕು. ಸೈಬರ್ ಕಾನೂನುಗಳ ಬಗ್ಗೆ ಎಲ್ಲರಿಗೂ ಅರಿವು ಅತ್ಯಗತ್ಯ. ಡಿಜಿಟಲ್ ಜಾಗತಿಕತೆ ಮತ್ತು ಸೈಬರ್ ಕಾನೂನುಗಳ ಬಗ್ಗೆ ಅರಿತು, ಜವಾಬ್ದಾರಿಯುತವಾಗಿ ಸಾಗಬೇಕು. ಇಂತಹ ಶಿಸ್ತು, ಆನ್ ಲೈನ್ ವಂಚಕರು, ಸೈಬರ್ ಅಪರಾಧಿಗಳ ಬಗ್ಗೆ ಸದಾ ಜಾಗೃತರಾಗಿದ್ದರೆ, ಸೈಬರ್ ಅಪರಾಧಗಳನ್ನು ಸಾಕಷ್ಟು ತಡೆಯಲು ಸಾಧ್ಯ- ಪದ್ಮಶ್ರೀ ಗುಂಜಿಕರ್, ಉಪ ಅಧೀಕ್ಷಕಿ
- - - -6ಕೆಡಿವಿಜಿ1, 2.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ 20ನೇ ವರ್ಷದ ವಾರ್ಷಿಕೋತ್ಸವ, ಸೈಬರ್ ಅಪರಾಧ ತಡೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಿಇಎನ್ ಅಪರಧ ತಡೆ ಪೊಲೀಸ್ ಠಾಣೆ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಉದ್ಘಾಟಿಸಿದರು. ನಾಗರಾಜ ಬಡದಾಳ್, ಈ.ಬಸವರಾಜ ಇದ್ದರು.