ಸಾರಾಂಶ
ಕೊರೋನಾ ಹಾವಳಿ ಮತ್ತೆ ಆರಂಭ ಆಗಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಂತೆ ದಿನೇಶ್ ಗುಂಡೂರಾವ್ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲೇ ಬೆಂಗಳೂರಿನಲ್ಲಿ ಹೆಚ್ಚು ಕೊರೋನಾ ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಕೊರೋನಾ ಮುನ್ನೆಚ್ಚರಿಕಾ ಕ್ರಮ ಅನುಸರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ಸೂಚನಾ ಟಿಪ್ಪಣಿ ನೀಡಿರುವ ಸಚಿವರು, ರಾಜ್ಯದಲ್ಲಿ ಸಕ್ರಿಯವಾಗಿರುವ 464 ಸೋಂಕು ಪ್ರಕರಣದಲ್ಲಿ 376 ಪ್ರಕರಣ ಬೆಂಗಳೂರು ನಗರದಲ್ಲಿ ವರದಿಯಾಗಿವೆ. 9 ಸಾವಿನಲ್ಲಿ 4 ಸಾವು, ಜೆಎನ್.1 ಉಪತಳಿಯ 34 ಪ್ರಕರಣದಲ್ಲಿ 21 ಬೆಂಗಳೂರಿನಲ್ಲೇ ದೃಢಪಟ್ಟಿವೆ.
ಹೀಗಾಗಿ ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಸಂದಣಿ ಪ್ರದೇಶ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಜನಸಂದಣಿ ಆಗುವುದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮುಂಜಾಗ್ರತಾ ಕ್ರಮ ಪಾಲಿಸಲು ಜಾಗೃತಿ ಮೂಡಿಸಬೇಕು. ಆಚರಣೆಗಳಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಉತ್ತೇಜಿಸಬೇಕು ಎಂದು ತಿಳಿಸಿದ್ದಾರೆ.2,492 ಮಂದಿಗೆ ಪರೀಕ್ಷೆ, 85 ಮಂದಿಗೆ ಕೊರೋನಾಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪರೀಕ್ಷೆ ಹೆಚ್ಚಿಸಲಾಗುತ್ತಿದ್ದು, ಗುರುವಾರ 2,492 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 85 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಗುರುವಾರ 51 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮೃತಪಟ್ಟ ಕುರಿತು ವರದಿಯಾಗಿಲ್ಲ. ನಗರದಲ್ಲಿ ಒಟ್ಟು 414 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಮೂರು ದಿನದಿಂದ ನಗರದಲ್ಲಿ ಪ್ರತಿ ದಿನ ಎರಡು ಸಾವಿರಕ್ಕೂ ಅಧಿಕ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮಂಗಳವಾರ 2,104, ಬುಧವಾರ 2,321 ಹಾಗೂ ಗುರುವಾರ 2,492 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.